ಪೊನ್ನಂಪೇಟೆ, ಫೆ. 12: ಕೊಡಗು ಜಿಲ್ಲೆಗೆ ರೈಲು ಮಾರ್ಗ ಬೇಡ ಎಂದು ಡೋಂಗಿ ಪರಿಸರವಾದಿಗಳು ತಮ್ಮ ಸ್ವಂತ ಲಾಭಕ್ಕಾಗಿ ಇದೀಗ ಹುಯಿಲೆಬ್ಬಿಸುತ್ತಿದ್ದಾರೆ. ಇಂತಹ ಡೋಂಗಿ ಮತ್ತು ಅಪ್ರಮಾಣಿಕ ಪರಿಸರವಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಮೈಸೂರು ಸೇರಿದಂತೆ ಕೊಡಗಿನ ಕೊಡವ ಸಮಾಜಗಳು ‘ಕೊಡಗಿಗೆ ರೈಲು ಬೇಡ’ ಎನ್ನುವ ಆಂದೋಲನವನ್ನು ಸಂಘಟಿಸುತ್ತಿರುವದು ನಿಜಕ್ಕೂ ದುರದೃಷ್ಟಕರವಾಗಿದೆ ಎಂದು ಹಿರಿಯ ರಾಜಕಾರಿಣಿ ಎ.ಕೆ ಸುಬ್ಯಯ್ಯ ಟೀಕಿಸಿದ್ದಾರೆ.

ಹುದಿಕೇರಿ ಬಳಿಯ ಬೆಳ್ಳೂರಿನಲ್ಲಿರುವ ತಮ್ಮ ತೋಟದ ನಿವಾಸದಲ್ಲಿ ಮಾತನಾಡಿದ ಅವರು, ಕೊಡಗಿಗೆ ಇಂದಿನ ಕಾಲಘಟ್ಟದಲ್ಲಿ ರೈಲ್ವೆ ಪ್ರಯಾಣಕ್ಕಿಂತ ಪರಿಸರ ಸ್ನೇಹಿ, ಕಡಿಮೆ ವೆಚ್ಚದ ಮತ್ತು ಸುಖಕರವಾದ ಸಂಚಾರ ವ್ಯವಸ್ಥೆ ಮತ್ತೊಂದಿಲ್ಲ. ಇಂಥ ರೈಲನ್ನೇ ‘ರಾಕ್ಷಸ’ ಎಂದು ಕರೆಯುತ್ತಾ ಕೊಡಗಿಗೆ ರೈಲೇ ಬೇಡ ಎಂದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ತೋಡಿದ ಗುಂಡಿಗೆ ಜನ ಬಿದ್ದಂತಾಗುತ್ತದೆ. ‘ರೈಲು ಬೇಡ, ಹೆದ್ದಾರಿ ಬೇಡ’ ಎಂದು ಪದೇ ಪದೇ ಕೂಗೆಬ್ಬಿಸುದರ ಹಿಂದೆ ಒಂದು ಅಂತರ್ರಾಷ್ಟ್ರೀಯ ಪಿತೂರಿಯಿದೆ ಎಂದು ಆರೋಪಿಸಿದರಲ್ಲದೆ, ಇದರ ಅಂಗವಾಗಿಯೇ ಕೊಡಗಿನ ಡೋಂಗಿ ಪರಿಸರವಾದಿಗಳನ್ನು ಏಜೆಂಟರುಗಳಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ರಹಸ್ಯ ಒಂದಲ್ಲ ಒಂದು ದಿನ ಅರ್ಥವಾಗುತ್ತದೆ ಎಂದರು.

ಅರಣ್ಯ ಇಲಾಖೆ ಹಾಗೂ ಇದೇ ಡೋಂಗಿ ಮತ್ತು ಅಪ್ರಮಾಣಿಕ ಪರಿಸರವಾದಿಗಳು ಕೊಡಗಿನ ಕಾಫಿ ತೋಟಗಳಿರುವ ಬಾಣೆ ಜಮೀನುಗಳು ಸರಕಾರಕ್ಕೆ ಸೇರಿದ್ದು ಎಂಬ ವಾದವನ್ನು ಇಂದಿಗೂ ಕೂಡ ಮಂಡಿಸುತ್ತಿದ್ದಾರೆ. ಕೊಡಗಿಗೆ ರೈಲು ಬೇಡ, ಹೆದ್ದಾರಿ (ಹೈವೇ) ಬೇಡ ಎಂಬ ವಾದದ ಹಿಂದೆ ಇಡೀ ಕೊಡಗಿನ ಕೃಷಿಯನ್ನು ನಾಶ ಮಾಡಿ ಸಂಪೂರ್ಣ ಕೊಡಗು ಜಿಲ್ಲೆಯನ್ನು ‘ಅರಣ್ಯ ಪ್ರದೇಶ’ ಎಂದು ಘೋಷಣೆ ಮಾಡುವ ಷಡ್ಯಂತ್ರವಿದೆ. ಅದಕ್ಕಾಗಿಯೆ ಆನೆಗಳನ್ನು, ಕಾಡುಕೋಣಗಳನ್ನು ಅರಣ್ಯದಿಂದ ನಿರಂತವಾಗಿ ಕಾಫಿ ತೋಟದ ಕಡೆಗೆ ಅಟ್ಟಲಾಗುತ್ತಿದೆ. ಕೊಡಗಿನಲ್ಲಿ ಇದೀಗ ಹೋರಾಟ ಮಾಡಬೇಕಿರುವದು ಕಾಡಾನೆ ಮತ್ತು

(ಮೊದಲ ಪುಟದಿಂದ) ಇತರ ಕಾಡುಪ್ರಾಣಿಗಳ ಉಪಟಳದ ಮತ್ತು ಕೊಡಗನ್ನು ಸೂಕ್ಷ್ಮ ಪರಿಸರ ತಾಣ ಎಂದು ಘೋಷಿಸಿರುವದರ ವಿರುದ್ಧವೇ ಹೊರತು ರೈಲು ಮಾರ್ಗದ ವಿರುದ್ಧ ಅಲ್ಲ ಎಂದರು. ಈ ಹಿಂದೆ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಇಡೀ ಕೊಡಗಿನಲ್ಲಿ ಜನಾಂದೋಲನ ನಡೆಯುತ್ತಿದ್ದಾಗ ಮೈಸೂರು ಕೊಡವ ಸಮಾಜದಲ್ಲಿ ಇದೇ ಡೋಂಗಿ ಮತ್ತು ಅಪ್ರಮಾಣಿಕ ಪರಿಸರವಾದಿಗಳು ಸಭೆ ನಡೆಸಿ ಕಸ್ತೂರಿ ರಂಗನ್ ವರದಿ ಕೊಡಗಿನಲ್ಲಿ ಜಾರಿಯಾಗಬೇಕೆಂದು ನಿಲುವು ಕೈಗೊಂಡಿದ್ದನ್ನು ಜಿಲ್ಲೆಯ ಜನತೆ ಮರೆಯಬಾರದು. ಮೈಸೂರು ಕೊಡವ ಸಮಾಜ ಇದೀಗ ಕೆಲವು ಹಿತಾಸಕ್ತರ ಕೈವಶದಲ್ಲಿದೆ. ಅವರನ್ನು ಈ ಪರಿಸರವಾದಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಕೊಡಗಿನ ಇತರ ಕೊಡವ ಸಮಾಜಗಳು ಡೋಂಗಿ ಬೆಂಬಲಕ್ಕೆ ನಿಂತಂತಿದೆ. ಕೊಡವ ಸಮಾಜಗಳು ಕೂಡ ರೈಲು ಯೋಜನೆ ವಿರುದ್ಧ ಕೈಜೋಡಿಸಿದರೆ ಪಟ್ಟಭದ್ರ ಹಿತಾಸÀಕ್ತಿಗಳು ತೋಡಿದ ಗುಂಡಿಗೆ ಬಿದ್ದಂತಾಗುತ್ತದೆ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದರು.

ಕೊಡಗಿನ ಕೃಷಿಕರ ಕುಟುಂಬಗಳಲ್ಲಿ 20 ವರ್ಷ ಪ್ರಾಯ ಮೀರಿದ ಯುವಕ-ಯುವತಿಯರು ಮನೆಯಲ್ಲಿಲ್ಲ. ಇವರ್ಯಾರು ಮರಳಿ ಕೊಡಗಿಗೆ ಬಂದು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವದಿಲ್ಲ. ಕೇವಲ ಹಿರಿಯರು, ಮಾತ್ರ ಮನೆಯಲ್ಲಿದ್ದಾರೆ. ಇವರ ಕಾಲಾನಂತರ ಕೊಡಗಿನ ಕೃಷಿಯ ಗತಿಯೇನು? ಎಂದು ಪ್ರಶ್ನಿಸಿದರಲ್ಲದೆ, ಇಂಥ ಸಮಸ್ಯೆಗಳ ಬಗ್ಗೆ ಹೆಚ್ಚು ಚಿಂತೆ ಮಾಡುವದು ಇಂದಿನ ಅತ್ಯಗತ್ಯವಾಗಿದೆ. ಅದು ಬಿಟ್ಟು ಕೃಷಿಗೆ ಪೂರಕವಾಗಿರುವ ರೈಲು ಮತ್ತು ಹೆದ್ದಾರಿ ಯೋಜನೆ ಬೇಡ ಎಂದು ಕೆಲವರು ಕೂಗೆಬ್ಬಿಸುತ್ತಿರುವದು ನಾಚಿಕೆಗೇಡು ಮತ್ತು ದುರದೃಷ್ಟಕರ ಎಂದು ಅಸಮಾದಾನ ವ್ಯಕ್ತಪಡಿಸಿದರು.

ಕೊಡಗಿಗೆ ಮಾತ್ರ ರೈಲು ಬೇಡ ಎನ್ನುವವರು, ಯಾಕೆ ರೈಲು ಬೇಡ ಎನ್ನುವುದಕ್ಕೆ ಯೆಥೇಚ್ಚವಾಗಿ ಮರಗಳನ್ನು ಕಡಿಯಲಾಗುತ್ತದೆ ಎಂಬ ಕಾರಣ ನೀಡುತ್ತಿದ್ದಾರೆ. ಹಾಗಾದರೆ ಇದೀಗ ನಾಪೋಕ್ಲು ಸಮೀಪದ ಪಾಲೇಮಾಡಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಯೋಜನೆ ತಯಾರಾಗಿದೆ. ಉದ್ದೇಶಿತ ಈ ಯೋಜನೆಯಿಂದ ಅಲ್ಲಿ ಸಾವಿರಾರು ಮರಗಳ ನಾಶವಾಗಲಿದೆ. ಈ ಬಗ್ಗೆ ಕೊಡಗಿಗೆ ರೈಲು ಬೇಡ ಎಂದು ಕೂಗುತ್ತಿರುವ ಪರಿಸರ (ವಾದಿ) ಪ್ರೇಮಿಗಳ ಮೌನವೇಕೆ?. ಇವರ ಪ್ರಾಮಾಣಿಕತನವೇ ಪ್ರಶ್ನಾರ್ಥಕವಾಗಿದೆ ಎನ್ನುವದನ್ನು ಜನತೆ ಅರ್ಥೈಸಿಕೊಳ್ಳಬೇಕಿದೆ. ಕೊಡಗಿನ ಮೂಲಕ ಯಾವದೇ ಹೆದ್ದಾರಿ ಯೋಜನೆ ಜಾರಿಯಾಗಬಾರದು ಎಂದು ಕೆಲ ಪರಿಸರವಾದಿಗಳು ಮತ್ತು ಕೆಲವು ಸಂಘಟನೆಗಳ ಪದಾಧಿಕಾರಿ ಗಳು ಪಿತೂರಿಯ ಭಾಗವಾಗಿ ಬಾಯಿಬಡಿದು ಕೊಳ್ಳುತ್ತಿದ್ದಾರೆ. ಇವರೆಲ್ಲಾ ವಾಹನಗಳನ್ನು ಬಳಸದಿರಲು ಸಿದ್ದರಿದ್ದಾರೆಯೇ? ಎಂದು ಸುಬ್ಬಯ್ಯ ಪ್ರಶ್ನಿಸಿದ್ದಾರೆ. ಇಂಥವರು ಮನೆಗೆ 2ರಿಂದ 3 ವಾಹನ ಹೊಂದಿರುತ್ತಾರೆ. ಆದರೆ ವಾಹನ ಸಂಚರಿಸಲು ಉತ್ತಮ ಸೌಲಭ್ಯವುಳ್ಳ ಹೆದ್ದಾರಿ ಬೇಡ ಎನ್ನುವದು ಯಾವ ನ್ಯಾಯ?. ತಂತ್ರಜ್ಞಾನ ಆವಿಷ್ಕಾರಗೊಂಡ 21ನೇ ಶತಮಾನದಲ್ಲೂ ಹೀಗೆಲ್ಲಾ ಹೇಳಿಕೊಳ್ಳುವದು ನಾಚಿಕೆಗೇಡಿನ ವಿಚಾರವಲ್ಲದೆ ಮತ್ತೇನು? ಎಂದು ಅವರು ಛೇಡಿಸಿದರು.