ಮಡಿಕೇರಿ ಫೆ.12 :ರಾಜ್ಯ ಸರ್ಕಾರ ಕೊಡಗು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡದೆ ಮಲತಾಯಿ ಧೋರಣೆಯನ್ನು ತೋರುತ್ತಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಶಾಸಕರುಗಳು ಪ್ರತಿದಿನ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸುತ್ತಿದ್ದಾರೆ, ಇದು ಯಾವ ಅನುದಾನದ ಕಾಮಗಾರಿಗಾಗಿ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶಿವು ಮಾದಪ್ಪ ಪ್ರಶ್ನಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ನೆರವನ್ನು ನೀಡಿದೆ. ಆದರೆ, ವಿನಾಕಾರಣ ಶಾಸಕರುಗಳು ಆರೋಪ ಮಾಡುತ್ತಿದ್ದು, ಜಿಲ್ಲೆಗೆ ಇವರ ಕೊಡುಗೆ ಏನು ಎನ್ನುವದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು. ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದ ಶಾಸಕರುಗಳು ಟೀಕೆ ಮಾಡುವದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು, ಕಾಡಾನೆ ಹಾವಳಿ ಮತ್ತು ರೈಲು ಮಾರ್ಗದ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ, ಶಾಸಕರುಗಳು ಜನಪರ ಕಾಳಜಿ ತೋರದೆ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.

ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದ ಪ್ರತಾಪ ಸಿಂಹ ಅವರು, ಕೇವಲ ಕೋಮು ಗಲಭೆಯಂತಹ ಪ್ರಕರಣಗಳಿಗಷ್ಟೆ ಸೀಮಿತವಾಗುತ್ತಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆದೇಶದಂತೆ ನಡೆದುಕೊಳ್ಳುತ್ತಿದ್ದಾರೆ. ಕೊಡಗು ಜಿಲ್ಲೆಗೆ ಸಂಸದರ ಕೊಡುಗೆ ಏನು ಎನ್ನುವದನ್ನು ಮೊದಲು ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ಕೊಡಗು ಜಿಲ್ಲೆಗೆ 2 ಸಾವಿರ ಕೋಟಿಗೂ ಅಧಿಕ ಮೊತ್ತದ ಅನುದಾನವನ್ನು ನೀಡಿದೆಯೆಂದು ಸಮರ್ಥಿಸಿಕೊಂಡರು.

ಯುಜಿಡಿ ಕಾಮಗಾರಿಯ ನೆಪವೊಡ್ಡಿ ನಗರಸಭೆಯ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿರುವದು ಜನರ ಕಣ್ಣಿಗೆ ಮಂಕು ಬೂದಿ ಎರಚುವ ಪ್ರಯತ್ನವಾಗಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವದರಿಂದ ಬಿಜೆಪಿ ಮಂದಿ ಪ್ರತಿಭಟನೆಯ ನಾಟಕ ವಾಡುತ್ತಿದ್ದಾರೆ ಎಂದು ಟೀಕಿಸಿದರು. ಯುಜಿಡಿ ಅನುದಾನ ಕೇಂದ್ರ್ರ ಸರ್ಕಾರದ್ದು ಎಂದು ಹೇಳಿಕೊಂಡೇ ಬಂದಿರುವ ಬಿಜೆಪಿ ಇದೀಗ ಅದೇ ಕಾಮಗಾರಿಯನ್ನು ವಿರೋಧಿಸುವದು ಹಾಸ್ಯಾಸ್ಪದವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಮಡಿಕೆÉೀರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ ಉಪಸ್ಥಿತರಿದ್ದರು.