ಚೆಟ್ಟಳ್ಳಿ, ಫೆ. 14 ಚೆಟ್ಟಳ್ಳಿಯ ಭಾಗ್ಯಲಕ್ಷ್ಮಿ ಸ್ತ್ರೀಶಕ್ತಿ ಸಂಘದಲ್ಲಿ ಸಾಲಪಡೆದವರು ಹಣ ಕಟ್ಟದೆ ಹಾಗೂ ಹಣದುರುಪಯೋಗವಾಗಿ ವಸೂಲಾತಿಗಾಗಿ ಸಂಘದವರೆಲ್ಲ ಚೆಟ್ಟಳ್ಳಿ ಪೊಲೀಸ್ ಉಪಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ.

ಸ್ತ್ರೀಶಕ್ತಿ ಸಂಘದ ವ್ಯವಹಾರವು ಚೆಟ್ಟಳ್ಳಿ ಸಿಂಡಿಕೇಟ್ ಬ್ಯಾಂಕಿನಲ್ಲಿ ನಡೆಯತ್ತಿದ್ದರೆ, ಸ್ವಸಹಾಯ ಸಂಘಗಳ ವ್ಯವಹಾರವೆಲ್ಲ ಚೆಟ್ಟಳ್ಳಿ ಸಹಕಾರ ಬ್ಯಾಂಕಿನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ.

ಸಂಘದಲ್ಲಿ ಸದಸ್ಯರಾದವರಿಗೆಲ್ಲ ಸಂಘದಲ್ಲಿ ಸಾಲ ಪಡೆವ ಅವಕಾಶವಿದೆಯೆಂಬ ಕಾರಣಕ್ಕಾಗಿ ಸಾಲಕ್ಕಾಗಿ ಅರ್ಜಿಸಲ್ಲಿಸಿದವರಿಗೆ ಸಭೆಯಲ್ಲಿ ತೀರ್ಮಾನಿಸಿ ಬ್ಯಾಂಕಿನಲ್ಲಿ ಸಂಘದ ಎಲ್ಲರೂ ಸಹಿ ಮಾಡಿ ಐದು ಸಾವಿರದಿಂದ ಹಿಡಿದು ಒಂದೆರಡು ಲಕ್ಷದ ವರೆಗೆ ಸಾಲ ನೀಡಿದ್ದೂ ಆಯಿತು. ಸಾಲ ವಸೂಲಾತಿಯಲ್ಲಿ ಮೊದಲ ಕೆಲವು ಕಂತು ಕಟ್ಟಿದ ಕೆಲವು ಮಹಿಳೆಯರು ಬಳಿಕ ಹಣ ಕಟ್ಟಲಾಗದೆ ಸಂಘದಿಂದ ದೂರ ಉಳಿಯಲು ಪ್ರಾರಂಭಿಸಿದರು. ನೂರೆಂಟು ಸಬೂಬು ಹೇಳಿ ಹಣ ನೀಡದೆ ಅವಿತರು.

ಮಹಿಳೆಯರು ಎರಡು ಮೂರು ಸಂಘದಲ್ಲಿ ಸದಸ್ಯತ್ವ

ಪ್ರತೀಯೊಂದು ಸಂಘದ ನಿಯಮದಂತೆ ಒಂದೆ ಸಂಘದಲ್ಲಿ ಮಾತ್ರ ಸದಸ್ಯರಾಗಬೇಕು. ಆದರೆ ಚೆಟ್ಟಳ್ಳಿಯಲ್ಲಿ ಸ್ತ್ರೀಶಕ್ತಿ ಸಂಘದಲ್ಲಿರುವ ಮಹಿಳೆಯರು ಧರ್ಮಸ್ಥಳ ಸಂಘ ಹಾಗೂ ಸ್ವಸಹಾಯ ಸಂಘದಲ್ಲಿ ಸದಸ್ಯರಾಗಿದ್ದಾರೆ. ಕೆಲವರು ಎರಡು ಮೂರು ಸಂಘಗಳಲ್ಲೂ ಸಾಲ ಪಡೆದ ಮಾಹಿತಿ ಇದೆ.

ಕಳೆದ ನಾಲ್ಕು ದಿನಗಳ ಹಿಂದೆ ಚೆಟ್ಟಳ್ಳಿಯ ಭಾಗ್ಯಲಕ್ಷ್ಮಿ ಸ್ತ್ರೀಶಕ್ತಿಯ ಸಂಘದ ಸ್ತ್ರೀಯರು ಚೆಟ್ಟಳ್ಳಿ ಪೊಲೀಸ್ ಉಪಠಾಣೆಯಲ್ಲಿ ಜಮಾಯಿಸಿ ಸಂಘದಿಂದ ಪಡೆದ ಸಾಲದ ಹಣ ಪಾವತಿಸದಿರುವವರ ಬಗ್ಗೆ ದೂರು ನೀಡಿದ್ದಾರೆ.

ಸಾಲ ಪಡೆದವರನ್ನು ಪ್ರಶ್ನಿಸಿ ದ್ದಾಗ ನಾವು ಸಂಘದ ಪ್ರತಿನಿಧಿ1 ಸೌಶ್ಯಳ ಬಳಿ ಹಣ ಪಾವತಿಸಿದ್ದೇವೆ. ಸೋಮವಾರ ಸಂಘದ ಸದಸ್ಯರು ಚೆಟ್ಟಳ್ಳಿ ಸಿಂಡಿಕೇಟ್‍ನ ಬ್ಯಾಂಕ್‍ನ ವ್ಯವಸ್ಥಾಪಕರನ್ನು ಭೇಟಿಯಾಗಿ ಮಾಹಿತಿ ಪಡೆದಾಗ ಸುಮಾರು 1.40ದಷ್ಷು ಸಾಲ ಪಾವತಿಸಲು ಬಾಕಿ ಇದ್ದು ಸಂಘದ ಪ್ರತಿನಿಧಿಗೆ ನೊಟೀಸ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಹಲವು ವರ್ಷಗಳ ಹಿಂದೆ ಚೆಟ್ಟಳ್ಳಿಯಲ್ಲಿ ಭಾಗ್ಯಲಕ್ಷ್ಮಿ ಸ್ತ್ರೀಶಕ್ತಿ ಸಂಘವನ್ನು ಚೆಟ್ಟಳ್ಳಿ ಅಂಗನವಾಡಿ ಶಿಕ್ಷಕಿಯ ಮಾರ್ಗದರ್ಶನದಂತೆ ಚೆಟ್ಟಳ್ಳಿಯ ಹಲವು ಮಹಿಳೆಯರನ್ನು ಸೇರಿಸಿ ಪ್ರಾರಂಭಿಸಲಾಯಿತು. ಸೌಶ್ಯ ಎಂಬಾಕೆ ಸಂಘದ ಪ್ರತಿನಿಧಿಯಾಗಿ ಆಯ್ಕೆಯಾದಲ್ಲಿಂದ ಸಂಘದ ಹಣವನ್ನು, ಸಾಲದ ಹಣವನ್ನು ಪಡೆದುಕೊಳ್ಳುತಿದ್ದರಂತೆ ಈ ಹಣ ಎಲ್ಲಿ ಹೋಯಿತು ಎಂಬದು ಸದಸ್ಯರ ಪ್ರಶ್ನೆ.