ಮೂವರು ಭಾರತೀಯ ಯೋಧರಿಗೆ ಗಾಯ

ಜಮ್ಮು, ಫೆ. 9: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ಧಾಳಿ ನಡೆಸುತ್ತಿದ್ದು ಈ ಗುಂಡಿನ ಧಾಳಿಯಲ್ಲಿ ಮೂವರು ಭಾರತೀಯ ಯೋಧರು ಗಾಯಗೊಂಡಿದ್ದಾರೆ. ಅಂತರರಾಷ್ಟ್ರೀಯ ಗಡಿಯ ಕೃಷ್ಣಗಾಟಿ ಸೆಕ್ಟರ್ ಬಳಿ ಪಾಕ್ ಸೈನಿಕರು ನಿರಂತರವಾಗಿ ಗುಂಡಿನ ಧಾಳಿ ನಡೆಸುತ್ತಿದ್ದಾರೆ. ಇದಕ್ಕೆ ಭಾರತೀಯ ಯೋಧರು ಸಹ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ. ಪಾಕ್ ಸೈನಿಕರ ಗುಂಡಿನ ಧಾಳಿಯಲ್ಲಿ ಮೂವರು ಭಾರತೀಯ ಯೋಧರಿಗೆ ಸಣ್ಣ ಗಾಯಗಳಾಗಿದ್ದು ಅವರಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಗಡಿಯಲ್ಲಿ ಪಾಕ್ ಸೈನಿಕರು ನಡೆಸಿದ ಅಪ್ರಚೋದಿತ ಗುಂಡಿನ ಧಾಳಿಯಲ್ಲಿ 45 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದರು.

ಆರೋಗ್ಯ ಸೂಚ್ಯಂಕ : ಕೇರಳ ಮೊದಲು

ನವದೆಹಲಿ, ಫೆ. 9: ನೀತಿ ಆಯೋಗ ಸಿದ್ಧಪಡಿಸಿರುವ ಆರೋಗ್ಯ ಸೂಚ್ಯಂಕ ವರದಿ ಬಿಡುಗಡೆಯಾಗಿದ್ದು, ಕೇರಳ ಮೊದಲ ಸ್ಥಾನ ಪಡೆದಿದೆ. ಪಂಜಾಬ್ ಮತ್ತು ತಮಿಳುನಾಡು ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದು, ಉತ್ತರ ಪ್ರದೇಶ ಅತ್ಯಂತ ಕಳಪೆ ಸಾಧನೆ ಮಾಡಿರುವದು ವರದಿಯಲ್ಲಿ ಬಹಿರಂಗವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಜಾರ್ಖಂಡ್ ಉತ್ತಮ ಪ್ರಗತಿ ತೋರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶಗಳಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ವರದಿ ವಿವರಿಸಿದೆ. ಆದಾಗ್ಯೂ, ಸೂಚ್ಯಂಕದಲ್ಲಿ ಉನ್ನತ ಸ್ಥಾನದಲ್ಲಿರುವ ರಾಜ್ಯಗಳು ಮೈಮರೆಯದಂತೆ ಹಾಗೂ ಗುಣಮಟ್ಟವನ್ನು ಅದೇ ರೀತಿ ಕಾಪಾಡಿಕೊಳ್ಳುವಂತೆ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಭಾರತದಲ್ಲಿದೆ ಕೋಟ್ಯಾಧಿಪತಿಗಳ ಹಳ್ಳಿ

ಇಟಾನಗರ, ಫೆ. 9: ತಾವಾಂಗ್ ಗ್ಯಾರಿಸನ್‍ನ ಪ್ರಮುಖ ಯೋಜನೆ ಘಟಕಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತೀಯ ಸೇನೆಯು ಅರುಣಾಚಲ ಪ್ರದೇಶದ ಬೊಮ್ಜ ಎಂಬ ಹಳ್ಳಿಯನ್ನು ಭೂಸ್ವಾಧೀನ ಪಡಿಸಿಕೊಂಡಿದ್ದು ಇದರ ಪರಿಹಾರ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಇದರಿಂದಾಗಿ ಈ ಹಳ್ಳಿ ಏಷ್ಯಾದ ಅತೀ ಶ್ರೀಮಂತ ಹಳ್ಳಿಯಾಗಿ ಹೊರಹೊಮ್ಮಿದೆ. ಬೊಮ್ಜ ಹಳ್ಳಿಯ ಎಲ್ಲಾ ಕುಟುಂಬಗಳಿಗೂ ಪರಿಹಾರ ಹಣವನ್ನು ವಿತರಿಸಲಾಗಿದ್ದು ಪ್ರತಿಯೊಂದು ಕುಟುಂಬವು ಕನಿಷ್ಟ 1 ಕೋಟಿಗಿಂತ ಹೆಚ್ಚು ಹಣ ಪಡೆದಿರುವದರಿಂದ ಈ ಹಳ್ಳಿಯ ಜನರು ಕೋಟ್ಯಾಧಿಪತಿಗಳಾಗಿದ್ದಾರೆ. ಈ ಹಳ್ಳಿಯಲ್ಲಿ 31 ಕುಟುಂಬಗಳಿದ್ದು 29 ಕುಟುಂಬಗಳಿಗೆ ತಲಾ 1.09 ಕೋಟಿ ಪರಿಹಾರ ಹಣವನ್ನು ನೀಡಲಾಗಿದೆ. ಇನ್ನು ಒಂದು ಕುಟುಂಬಕ್ಕೆ 6.73 ಕೋಟಿ ಮತ್ತು ಇನ್ನೊಂದು ಕುಟುಂಬ 2.44 ಕೋಟಿ ರೂಪಾಯಿಯನ್ನು ಪಡೆದಿದೆ. ಕೇಂದ್ರದ ರಕ್ಷಣಾ ಸಚಿವಾಲಯವು ಬೊಮ್ಜ ಹಳ್ಳಿಯಲ್ಲಿ 200 ಎಕರೆ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರ ಧನವಾಗಿ 40.8 ಕೋಟಿ ರುಪಾಯಿಯನ್ನು ಬಿಡುಗಡೆ ಮಾಡಿತ್ತು.

ಸಿದ್ದು ಪ್ರಧಾನಿಗೆ ಸರಿಸಮಾನ ಅಂದ್ರು ಸ್ವಾಮೀಜಿ

ದಾವಣಗೆರೆ, ಫೆ. 9: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಮಾನಾಗಿರುವ ವ್ಯಕ್ತಿ ಎಂದು ಕಾಗಿನೆಲೆ ಕನಕಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ. ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಪ್ರಧಾನಿ ಮೋದಿ ಸರಿಸಮಾನವಾದ ವ್ಯಕ್ತಿ ಯಾರದರೂ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಎಂದರು. ಅಲ್ಲದೆ ನಮ್ಮ ಹಾಲುಮತ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು ಆಗ ಸಿದ್ದರಾಮಯ್ಯ ಅವರು ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇಂದು ಬೆಳ್ಳೂಡಿಯಲ್ಲಿ ಹಮ್ಮಿಕೊಂಡಿರುವ ಕನಕ ಗುರುಪೀಠದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.

ಕಣಿವೆ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ಥ

ಶ್ರೀನಗರ, ಫೆ. 9: ಭಯೋತ್ಪಾದಕ ಅಫ್ಜಲ್ ಗುರುವಿಗೆ ಗಲ್ಲುಶಿಕ್ಷೆ ವಿಧಿಸಿದ 5 ನೇ ವರ್ಷಾಚರಣೆ ಹಿನ್ನೆಲೆ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಬಂದ್‍ಗೆ ಕರೆ ನೀಡಿದ್ದು, ಕಣಿವೆ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಹಿವಾಟು ನಡೆಸುವ ಕೇಂದ್ರಗಳು ಬಂದ್ ಆಗಿದ್ದು, ಕೇವಲ ಬೆರಳೆಣಿಕೆಯಷ್ಟೇ ವಾಹನಗಳು ಸಂಚರಿಸುತ್ತಿದ್ದವು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೂ ಬಂದ್ ಪರಿಣಾಮ ಬೀರಿದ್ದು, ಸರ್ಕಾರಿ ಕಚೇರಿ ಹಾಗೂ ಬ್ಯಾಂಕ್‍ಗಳಲ್ಲಿನ ಹಾಜರಾತಿಯೂ ಕಡಿಮೆ ಇತ್ತು. ಉಗ್ರ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ಜಾರಿಗೊಳಿಸಿರುವದನ್ನು ವಿರೋಧಿಸಿ ಪ್ರತ್ಯೇಕತಾವಾದಿಗಳು ಬಂದ್‍ಗೆ ಕರೆ ನೀಡಿದ್ದರು. 2013 ರ ತಾ. 9 ರಂದು ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿತ್ತು.

ಖಾಲಿ ಹುದ್ದೆಗಳ ಭರ್ತಿಗೆ ಸುಪ್ರೀಂ ಸೂಚನೆ

ನವದೆಹಲಿ, ಫೆ. 9: ಬಾಲಾಪರಾಧ ನ್ಯಾಯ ಕಾಯ್ದೆಯ ಪರಿಣಾಮಕಾರಿ ಜಾರಿಗೆ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ರಾಷ್ಟ್ರೀಯ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ಮದನ್ ಬಿ ಲೊಕೂರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ, ಬಾಲಾಪರಾಧಿ ನ್ಯಾಯ ಮಂಡಳಿ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನಿಯಮಾನುಸಾರ ತ್ವರಿತಗತಿಯಲ್ಲಿ ಭರ್ತಿ ಮಾಡಬೇಕೆಂದು ಹೇಳಿದೆ. ಮಕ್ಕಳ ಹಕ್ಕುಗಳ ಆಯೋಗಗಳಲ್ಲಿ ಸಿಬ್ಬಂದಿ ಕೊರತೆಯಿಂದ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಹೀಗಾಗಿ ವಿಳಂಬತೆಯನ್ನು ತಡೆಯಬೇಕೆಂದು ನ್ಯಾಯಪೀಠ ಹೇಳಿದೆ. ಬಾಲಾಪರಾಧ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ 2015 ಪರಿಣಾಮಕಾರಿಯಾಗಿ ಜಾರಿಗೆ ಬರಲು ನ್ಯಾಯಾಲಯದ ಕಲಾಪಗಳನ್ನು ಎಲ್ಲಾ ಹೈಕೋರ್ಟ್‍ಗಳು ದಾಖಲು ಮಾಡಿಕೊಳ್ಳಬೇಕು ಎಂದು ಎಲ್ಲಾ ಹೈಕೋರ್ಟ್‍ಗಳ ಮುಖ್ಯ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಮನವಿ ಮಾಡಿದೆ.

ಮೂವರಿಗೆ ಕೊಂಕಣಿ ವಿಶೇಷ ಗೌರವ ಪುರಸ್ಕಾರ

ಧಾರವಾಡ, ಫೆ. 9: ಕೊಂಕಣಿ ಮಾನ್ಯತಾ ಬೆಳ್ಳಿಹಬ್ಬ ವರ್ಷಾಚರಣೆ ಅಂಗವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನೀಡುವ ಕೊಂಕಣಿ ವಿಶೇಷ ಗೌರವ ಪುರಸ್ಕಾರ ಉತ್ತರ ಕರ್ನಾಟಕದ ಮೂವರಿಗೆ ಲಭಿಸಿದೆ. ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಧಾರವಾಡದ ಹಿರಿಯ ಕೊಂಕಣಿ ಸಾಹಿತಿ ಚಿತ್ರಾ ದುರ್ಗಾದಾಸ ಶಿರಾಲಿ ಹಾಗೂ ಹುಬ್ಬಳ್ಳಿಯ ಉದಯೋನ್ಮುಖ ಯುವ ಕಲಾವಿದೆ ಆಮೋದಿನಿ ವಾಸುದೇವ ಮಹಾಲೆ ಮತ್ತು ಪತ್ರಿಕಾ ಕ್ಷೇತ್ರದಲ್ಲಿ ಬೆಳಗಾವಿಯ ಪತ್ರಕರ್ತ ವಿವೇಕ ಮಹಾಲೆಗೆ ಕೊಂಕಣಿ ವಿಶೇಷ ಗೌರವ ಪುರಸ್ಕಾರ ನೀಡಲಾಗುವುದು ಎಂದು ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯ ಸಂತೋಷ ಗಜಾನನ ಮಹಾಲೆ ತಿಳಿಸಿದ್ದಾರೆ. ಅಮೋದಿನಿ ಮಹಾಲೆ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅನೇಕ ಪ್ರಶಸ್ತಿ, ಗೌರವಗಳನ್ನು ಪಡೆದಿದ್ದು ಪ್ರಸ್ತುತ ಹುಬ್ಬಳ್ಳಿಯ ಕೆಎಲ್‍ಇ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಥಮ ಪಿಯುನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಪಂ. ನಾಗನಾಥ ವಡೆಯರ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ಹಾಗೂ ಪಂ. ಅಶೋಕ ನಾಡಿಗೇರ ಇವರಲ್ಲಿ ಸಂಗೀತಾಭ್ಯಸವನ್ನು ಮಾಡುತ್ತಿದ್ದಾಳೆ.

ಅಮೇರಿಕಾ ದ್ರೋಣ್ ಧಾಳಿ: ಉಗ್ರರ ಸಾವು

ಇಸ್ಲಾಮಾಬಾದ್, ಫೆ. 9: ಪಾಕಿಸ್ತಾನದಲ್ಲಿ ಮತ್ತೆ ಅಮೇರಿಕಾ ಸೇನೆಯ ದ್ರೋಣ್ ವಿಮಾನ ಧಾಳಿ ನಡೆಸಿದ್ದು, ಈ ಧಾಳಿಯಲ್ಲಿ ನಾಲ್ಕು ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನ-ಆಪ್ಘಾನಿಸ್ತಾನದ ಗಡಿ ಭಾಗ ಉತ್ತರ ವಜಿರೀಸ್ತಾನದ ಮೇಲೆ ಅಮೇರಿಕಾ ಸೇನೆಯ ಚಾಲಕ ರಹಿತ ಯುದ್ಧ ವಿಮಾನ ಡ್ರೋಣ್ ಧಾಳಿ ನಡೆಸಲಾಗಿದ್ದು, ಈ ವೇಳೆ ನಾಲ್ಕು ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನಿ ಮಾಧ್ಯಮಗಳ ವರದಿಯಂತೆ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ ಉಗ್ರ ಸಂಘಟನೆಯ ಕಮಾಂಡರ್ ಖಾನ್ ಸೈದ್ ಸಜ್ನಾ ಸೇರಿದಂತೆ ಹಖ್ಖಾನಿ ಉಗ್ರ ಸಂಘಟನೆ ಮೂವರು ಉಗ್ರರು ಧಾಳಿಯಲ್ಲಿ ಹತರಾಗಿದ್ದಾರೆ. ಕಳೆದ ಜನವರಿ ತಿಂಗಳಲ್ಲೂ ಅಮೇರಿಕಾ ಸೇನೆ ಪಾಕ್-ಆಫ್ಘನ್ ಗಡಿಯ ಹಂಗು ಜಿಲ್ಲೆಯಲ್ಲಿನ ಬುಡುಕಟ್ಟು ಪ್ರದೇಶದ ಮೂಲಭೂತವಾದಿಗಳ ಕ್ಯಾಂಪ್‍ಗಳ ಮೇಲೆ ಡ್ರೋಣ್ ಧಾಳಿ ನಡೆಸಿತ್ತು, ಈ ವೇಳೆ ಖೈಬರ್ ಪಕ್ತುಂಕ್ವಾದಲ್ಲಿ ಇಬ್ಬರು ತಾಲಿಬಾನ್ ಉಗ್ರರು ಹತರಾಗಿದ್ದರು.