ಮಡಿಕೇರಿ, ಫೆ. 9: ತನ್ನ ಪತ್ನಿಯೊಂದಿಗೆ ತೋಟದ ಮಾಲೀಕರಿಗೆ ಅಕ್ರಮ ಸಂಬಂಧವಿದೆಯೆಂಬ ಕಾರಣಕ್ಕೆ ಮಾಲೀಕರನ್ನು ಕತ್ತಿಯಿಂದ ಕಡಿದು ಹತ್ಯೆಗೈದುದಲ್ಲದೆ, ಪತ್ನಿಯನ್ನು ಕೂಡ ಹತ್ಯೆಗೈಯ್ಯಲು ಯತ್ನಿಸಿದ ಆರೋಪಿಗೆ ಇಲ್ಲಿನ ನ್ಯಾಯಾಲಯ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಮಡಿಕೇರಿ ತಾಲೂಕಿನ ಹೊಸ್ಕೇರಿ ಗ್ರಾಮದ ಬೊಳ್ಳೂರು ಮೋಹನ್ ಅವರಿಗೆ ಸೇರಿದ ಕಾಫಿ ತೋಟದ ಲೈನ್ ಮನೆಯಲ್ಲಿ ಜೇನುಕುರುಬರ ಮುತ್ತ ತನ್ನ ಹೆಂಡತಿ ಭಾಗ್ಯಳೊಂದಿಗೆ ವಾಸವಾಗಿದ್ದ. ಕಳೆದ ದಿನಾಂಕ 14.03.2015ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ಮೋಹನ್ ಅವರು ಆರೋಪಿಯು ವಾಸವಿದ್ದ ಲೈನ್‍ಮನೆಯಲ್ಲಿ ಇದ್ದ ಸಂದರ್ಭ ತನ್ನ ಹೆಂಡತಿಗೆ ಮೋಹನ್‍ನೊಂದಿಗೆ ಅನೈತಿಕ ಸಂಬಂಧವಿರುವ ಬಗ್ಗೆ ಸಂಶಯಗೊಂಡು ಅವರೊಂದಿಗೆ ಜಗಳ ತೆಗೆದು ತನ್ನ ಕೈಯಲ್ಲಿದ್ದ ಕತ್ತಿಯಿಂದ ಮೋಹನ್‍ರವರ ಮುಖ, ಕಣ್ಣು ಹಾಗೂ ಕುತ್ತಿಗೆಗೆ ಕಡಿದು ತೀವ್ರವಾಗಿ ಗಾಯಗೊಳಿಸಿ ಅವರನ್ನು ಕೊಲೆ ಮಾಡಿರುತ್ತಾನೆ. ಈ ಬಗ್ಗೆ ಪತ್ನಿ ಭಾಗ್ಯ ವಿಚಾರಿಸಿದಾಗ ಅದೇ ಕತ್ತಿಯಿಂದ ಭಾಗ್ಯಳ ತಲೆ ಕೈಗಳು ಮತ್ತು ಮೈಕೈಗಳಿಗೆ ಕಡಿದು ತೀವ್ರ ಸ್ವರೂಪದ ಗಾಯಪಡಿಸಿರುತ್ತಾನೆ ಎಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ಆರೋಪಿಯ ವಿರುದ್ಧ ಪ್ರಕರಣವು ಸಾಬೀತಾಗಿದ್ದರಿಂದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆಯು 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ಜೇನುಕುರುಬರ ಮುತ್ತ ಮೋಹನ್ ಅವರನ್ನು ಕೊಲೆ ಮಾಡಿ, ತನ್ನ ಪತ್ನಿ ಭಾಗ್ಯಳನ್ನು ಕಡಿದು ಕೊಲೆ ಮಾಡಲು ಪ್ರಯತ್ನಿಸಿರುವದು ಸಾಕ್ಷಿಗಳ ವಿಚಾರಣೆಯಿಂದ ಸಾಬೀತಾಗಿದೆ ಎಂದು 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ರೂ. 7,500 ದಂಡ, ಕೊಲೆ ಮಾಡಲು ಪ್ರಯತ್ನಿಸಿದ ಅಪರಾಧಕ್ಕಾಗಿ 6 ವರ್ಷಗಳ ಸಜೆ ಮತ್ತು ರೂ. 5,000 ದಂಡ ಪಾವತಿಸುವಂತೆ ವಿಧಿಸಿ ತೀರ್ಪು ನೀಡಿದ್ದಾರೆ. ವಸೂಲಾಗುವ ದಂಡದ ಹಣದಲ್ಲಿ ರೂ. 10,000ವನ್ನು ಆರೋಪಿಯ ಪತ್ನಿ ಭಾಗ್ಯಳಿಗೆ ಪರಿಹಾರವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕ ಎಂ. ಕೃಷ್ಣವೇಣಿ ನಡೆಸಿದ್ದಾರೆ.