ಮಡಿಕೇರಿ, ಫೆ. 9: ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ನಿಯಂತ್ರಿಸಲು ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಕರ್ನಾಟಕ ರೈತಸಂಘ ಜಿಲ್ಲಾ ಘಟಕ, ಜಿಲ್ಲಾ ರೈತರ ಹಾಗೂ ಕಾರ್ಮಿಕರ ಅರಣ್ಯ ಹೋರಾಟಗಾರರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯ ಬಾಲಭವನದಲ್ಲಿ ನಡೆದ ಸಭೆಯಲ್ಲಿ ತಾ. 11 ರಂದು ಅರಣ್ಯ ಭವನದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯೊಂದಿಗೆ ಭೇಟಿ ಮಾಡಿ ಚರ್ಚಿಸುವದಲ್ಲದೆ, ತಾ. 23 ರಂದು ಪ್ರತಿಭಟನೆ, ಜಾಥಾ ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.ಹೋರಾಟ ಸಮಿತಿಯ ಸಂಚಾಲಕ ಮಂಡೇಪಂಡ ಪ್ರವೀಣ್ ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ನಿರಂತರ ಕಾಡಾನೆಗಳ ಹಾವಳಿ ನಡೆಯುತ್ತಿದ್ದು, ಕಾರ್ಮಿಕರು, ಬೆಳೆಗಾರರು ಕಾಡಾನೆಗೆ ಸಿಲುಕಿ ಸಾವನಪ್ಪುತ್ತಿದ್ದಾರೆ. ಕೃಷಿ ಬೆಳೆ ನಾಶ ವಾಗುತ್ತಿದೆ. ಕಾಡಾನೆಗಳ ಹಾವಳಿ ಯನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಕಾರ್ಮಿಕರ, ಕಾಫಿ ಬೆಳೆಗಾರರ ಸಂಘ ಸಂಸ್ಥೆಗಳ ವತಿಯಿಂದ ಸಭೆ ಕರೆಯಲಾಗಿ ದೆಂದರು. ಕಾಡಾನೆಗಳ ಹಾವಳಿ ಮೀತಿ ಮೀರಿದ್ದರು ಕೂಡ ಸರ್ಕಾರವಾಗಲಿ, ಅರಣ್ಯ ಇಲಾಖಾಧಿಕಾರಿಗಳು ಯಾವದೇ ರೀತಿಯ ಶಾಶ್ವತ ಯೋಜನೆಯನ್ನು ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾ. 10 ರಂದು ಮಡಿಕೇರಿಗೆ ಆಗಮಿಸುವ ರಾಜ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆಶ್ವಾಸನೆ ನೀಡುವದು ಬೇಡ ಶಾಶ್ವತ ಯೋಜನೆ ರೂಪಿಸಲಿ ಎಂದು ಒತ್ತಾಯಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಜಿಲ್ಲೆಯಲ್ಲಿ ನಿರಂತರವಾಗಿ ಆನೆ - ಮಾನವ ಸಂಘರ್ಷ ನಡೆಯುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರು ಈ ಬಗ್ಗೆ ಶಾಶ್ವತ ಯೋಜನೆಯನ್ನು ಕೈಗೊಳ್ಳದೇ ನಿರ್ಲಕ್ಷ್ಯವಹಿಸುತ್ತಿದ್ದಾರೆಂದು ಆರೋಪಿಸಿದರು. ಕಾಡಾನೆಗಳಿಂದ ಅಮಾಯಕ ಕಾರ್ಮಿಕರು, ಬೆಳೆಗಾರರು ಬಲಿ ಯಾಗುತ್ತಿರುವ ಸರ್ಕಾರ ಮಾಡುವ ಕೊಲೆಯಾಗಿದೆ ಎಂದು ದೂರಿದರು.

(ಮೊದಲ ಪುಟದಿಂದ) ಕಾಡಾನೆಗಳ ಹಾವಳಿಯಿಂದಾಗಿ ಜಿಲ್ಲೆಯಲ್ಲಿ 38 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಶಾಶ್ವತ ಅಂಗವೈಫಲ್ಯದಿಂದ ಬಳಲುತ್ತಿದ್ದಾರೆಂದರು.

ಸಿಪಿಐಯಂ ಪಕ್ಷದ ಮುಖಂಡ ಡಾ. ದುರ್ಗಾಪ್ರಸಾದ್ ಮಾತನಾಡಿ, ಈ ಹಿಂದೆ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮನೋಜ್ ಕುಮಾರ್ ಕಾಡಾನೆಯ ಹಾವಳಿಯನ್ನು ನಿಯಂತ್ರಿಸಲು ಕಂದಕ ನಿರ್ಮಾಣದಿಂದಾಗಲಿ, ಸೋಲಾರ್ ಬೇಲಿಯಿಂದಾಗಲಿ ಸಾಧ್ಯವಿಲ್ಲವೆಂದು ಅಭಿಪ್ರಾಯಿಸಿದ್ದರು. ಆದರೆ ಅರಣ್ಯ ಸಚಿವರು ಕಂದಕ ನಿರ್ಮಾಣ ಮಾಡುವ ಮೂಲಕ ಕಾಡಾನೆಗಳ ಹಾವಳಿ ತಡೆಗಟ್ಟಬಹುದೆಂದು ಹೇಳಿಕೆ ನೀಡಿದ್ದು, ಇವರುಗಳದ್ದು ದ್ವಂದ್ವ ಹೇಳಿಕೆಯಾಗಿದಲ್ಲದೇ ತೇಗ ಮರಗಳಿಂದಾಗಿ ಅರಣ್ಯದಲ್ಲಿ ಆಹಾರ ಇಲ್ಲದೇ ನಾಡಿಗೆ ಕಾಡಾನೆ ಲಗ್ಗೆ ಇಟ್ಟಿದೆಂದರು.

ರಾಜ್ಯ ಬೆಳೆಗಾರರ ಒಕ್ಕೂಟದ ಮುಖಂಡ ಕೆ.ಕೆ. ವಿಶ್ವನಾಥ್ ಮಾತನಾಡಿ, ಕಾಡಾನೆ ಹಾವಳಿಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮಹತ್ವ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ಮಾಡುವ ಮೂಲಕ ಶಾಂತಿಯುತವಾಗಿ ಶಕ್ತಿ ಪ್ರದರ್ಶನ ಮಾಡಬೇಕೆಂದು ಸಲಹೆ ನೀಡಿದರು. ಚಿಕ್ಕಮಗಳೂರು, ಸಕಲೇಶಪುರ, ಕೊಡಗು ಜಿಲ್ಲೆಯ ಬೆಳೆಗಾರರು ಜಂಟಿಯಾಗಿ ಹೋರಾಟ ಮಾಡಬೇಕು. ಕೆಲಸ ಮಾಡದ ಅಧಿಕಾರಿಗಳ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.

ಎಂ. ಎಂ. ತಿಮ್ಮಯ್ಯ ಮಾತನಾಡಿ, ಕಾಡಾನೆ ಹಾವಳಿ ಬಗ್ಗೆ ಸರ್ಕಾರಗಳು ನಿಜ ಸ್ವರೂಪವನ್ನು ಮುಚ್ಚಿಡುತ್ತಿದೆಂದರು. ಕೆಲವು ಪರಿಸರವಾದಿಗಳು ಹೇಳಿಕೆ ನೀಡಿ ಕಾಡಾನೆಗಳು ವಾಸವಿರುವ ಜಾಗದಲ್ಲಿ ಜನವಾಸವಾಗಿದ್ದಾರೆಂದು ತಪ್ಪು ಮಾಹಿತಿ ನೀಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕ ಮುಖಂಡ ಮಹದೇವ್ ಮಾತನಾಡಿ, ಜಿಲ್ಲೆಯಲ್ಲಿ ಅಧಿಕಾರಿಗಳು ಹೋರಾಟದ ಸಂದರ್ಭದಲ್ಲಿ ಆಗಮಿಸಿ ಸುಳ್ಳು ಆಶ್ವಾಸನೆ ನೀಡಿ ತೆರಳುತ್ತಾರೆ. ಆದರೆ ತಾ. 23 ರಂದು ನಡೆಯುವ ಹೋರಾಟದಿಂದ ಹಿಂದೆ ಸರಿಯುವದಿಲ್ಲ. ಆ ದಿನ ಜಿಲ್ಲೆಯ ಎಲ್ಲಾ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಕಾಡಾನೆ ಹಾವಳಿ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ರಚನೆ ಮಾಡಿ ಹೋರಾಟವನ್ನು ಮುಂದುವರಿಸಲಾಗುವದು. ನ್ಯಾಯಾಲಯದ ಮುಖಾಂತರ ಹಾಗೂ ಬೀದಿಗಿಳಿದು ಹೋರಾಟ ಮಾಡುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.

ವೆಲ್‍ಫ್ಯಾರ್ ಪಕ್ಷದ ಮುಖಂಡ ಕೆ.ಟಿ. ಬಷೀರ್ ಮಾತನಾಡಿ, ದೇಶದಲ್ಲಿ ಹೋರಾಟದ ಮೂಲಕವೇ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಎಂದರು. ಸಿಐಟಿಯು ಸಂಘಟನೆ ಮುಖಂಡ ಹೆಚ್.ಬಿ. ರಮೇಶ್ ಮಾತನಾಡಿ, 2008ರಲ್ಲಿ ಅನುಷ್ಠಾನಕ್ಕೆ ತಂದ 360 ಕೋಟಿಯ ಯೋಜನೆಯನ್ನು ಜಾರಿಗೆ ತರಲು ಒತ್ತಾಯ ಹೇರಬೇಕೆಂದರು.

ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪರಮೇಶ್ ಮಾತನಾಡಿ, ಈ ಹಿಂದೆಯೇ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು ಒಗ್ಗೂಡಿ ಆನೆ - ಮಾನವ ಸಂಘರ್ಷದ ವಿರುದ್ಧ ಹೋರಾಟವನ್ನು ಮಾಡಿದ್ದರೆ, ಸಾಕಷ್ಟು ಜೀವಗಳು ಉಳಿಯುತ್ತಿದ್ದವು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ ಮಾತನಾಡಿ, ತಾ. 23 ರಂದು ಬೃಹತ್ ಹೋರಾಟ ರೂಪಿಸಬೇಕೆಂದರು. ಕಾರ್ಮಿಕ ಮುಖಂಡ ಸೋಮಪ್ಪ ಮಾತನಾಡಿ, ಕಾಡಾನೆಗಳ ಹಾವಳಿಯ ವಿರುದ್ಧ ಜಿಲ್ಲೆಯಲ್ಲಿ ಬಂದ್ ಮಾಡುವ ಮೂಲಕ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.

ಹೋರಾಟ ಸಮಿತಿಯ ಪ್ರಮುಖ ಪಿ. ಆರ್. ಭರತ್ ಮಾತನಾಡಿ, ತಾ. 23 ರಂದು ನಡೆಯುವ ಪ್ರತಿಭಟನೆಯಲ್ಲಿ ಗಾಂಧಿ ಮೈದಾನದಿಂದ ಅರಣ್ಯ ಭವನದವರೆಗೆ ಜಾಥಾ ನಡೆಸಲಾಗುವದು ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿ.ಎ. ನಂದಾ ಸುಬ್ಬಯ್ಯ ಮಾತನಾಡಿ, ಆನೆ - ಮಾನವ ಸಂಘರ್ಷ ಕಳೆದ 3 ದಶಕಗಳಿಂದ ಪ್ರಾರಂಭವಾಗಿದ್ದರೂ ಕೂಡ ಸರ್ಕಾರ ಯಾವದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು. ಇತ್ತೀಚಿನ ವರ್ಷಗಳಲ್ಲಿ ಕಾಫಿ ತೋಟಗಳಲ್ಲಿ ಲಗ್ಗೆ ಇಟ್ಟ ಕಾಡಾನೆಗಳು ತೋಟಗಳಿಂದ ಕದಲುತ್ತಿಲ್ಲ. ಕಾಡಾನೆಗಳ ಸಂಖ್ಯೆ ಮಿತಿಮೀರಿದ್ದು, ಕಾಫಿ ಬೆಳೆಗಾರರಿಗೆ, ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಕೆಲವು ಪರಿಸರವಾದಿಗಳು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದು, ಅವರ ಬಗ್ಗೆ ಎಚ್ಚರವಹಿಸಬೇಕೆಂದರು.

ಸಭೆಯಲ್ಲಿ ಬೆಳೆಗಾರರ ಸಂಘಟನೆಯ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಸಿ.ಪಿ. ಬೆಳ್ಯಪ್ಪ, ಬೋಸ್ ಮಂದಣ್ಣ, ಮುನೀರ್ ಅಹಮ್ಮದ್, ನಂದಿನೆರವಂಡ ದಿನೇಶ್, ಪಿ.ಯಂ. ಪುಟ್ಟುಸ್ವಾಮಿ, ಪುಚ್ಚಿಮಾಡ ಸಂದೀಪ್ ಮಾಚಯ್ಯ, ಸುಭಾಷ್, ಕೆ.ಪಿ. ನಂದಾ ಗಣಪತಿ, ರಾಜ ಗಣಪತಿ, ಕೆ.ಪಿ. ಪ್ರಭಾಕರ್ ಇನ್ನಿತರರು ಭಾಗವಹಿಸಿದ್ದರು. ರೆಜಿತ್‍ಕುಮಾರ್ ವಂದಿಸಿದರು.