ಮಡಿಕೇರಿ, ಫೆ. 9: ನಗರಸಭಾ ಆಡಳಿತ ವೈಫಲ್ಯ ಖಂಡಿಸಿ ನಗರ ಬಿಜೆಪಿ ವತಿಯಿಂದ ನಗರಸಭೆ ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಸಲಾಯಿತು.ಈ ಸಂದರ್ಭ ನಗರ ಬಿಜೆಪಿ ಸದಸ್ಯರು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ವಿರುದ್ಧ ಘೋಷಣೆ ಕೂಗಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ‘ಕಳೆದ ನಾಲ್ಕು ವರ್ಷಗಳಿಂದ ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್, ಒಳಜಗಳದಿಂದ ನಗರದ ಅಭಿವೃದ್ಧಿ ಮಾಡದೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.ಕೆಲಸ ಕಾರ್ಯಗಳಿಗೆ ನಗರಸಭೆಗೆ ಬರುವ ಸಾರ್ವಜನಿಕರು ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ, ನಗರಸಭೆ ಫಾರಂ-3 ನೂರಾರು ಅರ್ಜಿಗಳು ವಿಲೇವಾರಿಯಾಗದೆ ಬಾಕಿಯಿದೆ. ನಗರ ಸಭೆಯಲ್ಲಿ ನೌಕರರ ಕೊರತೆ ಕಾಡುತ್ತಿದೆ. ಈ ಸಂಬಂಧ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ನೀಡಿದ್ದರೂ ಯಾವದೇ ರೀತಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ‘ನಗರದಲ್ಲಿ ಶುಚಿತ್ವದ ಕೊರತೆ ಕಾಡುತ್ತಿದ್ದರೆ ಮತ್ತೊಂದೆಡೆ ಯು.ಜಿ.ಡಿ ಕಾಮಗಾರಿಗಳನ್ನು ಮಾಡುತ್ತ ರಸ್ತೆಯನ್ನು ಹಾಳು ಮಾಡುತ್ತಿದ್ದಾರೆ. ಕೆಲವು ಅಧಿಕಾರಿಗಳು ಅನಧಿಕೃತ ಕಟ್ಟಡಗಳಿಗೆ ಪರವಾನಗಿ ನೀಡುವದರ ಜತೆಗೆ ವಾಸ ದೃಢಿಕರಣ ಮತ್ತು ಜನನ ಮರಣ ಪತ್ರ ನೀಡುವಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.
ಮಹಿಳಾ ಮೋರ್ಚಾದ ನಗರ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ‘ಜಿಲ್ಲೆಗೆ ಹಾಗೂ ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ರಾಜಸೀಟ್ ಬಳಿ ಮಾತ್ರ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ, ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ನಮೋ ಗ್ರೂಪ್ ಫೌಂಡೇಶನ್ ವತಿಯಿಂದ ಬಿಜೆಪಿ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಯಿತು. ನಮೋ ಗ್ರೂಪ್ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳಚಂದ್ರ ಕಳಗಿ, ನಗರ ಉಪಾಧ್ಯಕ್ಷ ಬಿ.ಎಂ. ರಾಜೇಶ್, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ನಗರಸಭೆ ಸದಸ್ಯರಾದ ಸವಿತಾ ರಾಕೇಶ್, ಪಿ.ಡಿ. ಪೊನ್ನಪ್ಪ, ಉಣ್ಣಿಕೃಷ್ಣ ಮತ್ತಿತರರು ಹಾಜರಿದ್ದರು.