ಶನಿವಾರಸಂತೆ, ಫೆ. 7: ಹಿಂಜರಿಕೆ ಮಹಿಳೆಯ ಮೊದಲ ಶತ್ರುವಾಗಿದ್ದು, ಆ ಹಿಂಜರಿಕೆಯನ್ನು ತೊರೆದು ಮಹಿಳೆಯರು ಮುಂದೆ ಬಂದಲ್ಲಿ ಧ್ಯೇಯವನ್ನು ಹೊಂದಿ ಸಾಧಿಸಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ಸದಸ್ಯೆ ಕುಸುಮಾ ಅಶ್ವಥ್ ಅಭಿಪ್ರಾಯಪಟ್ಟರು.

ಸಮೀಪದ ನಂದಿಗುಂದ ಗ್ರಾಮದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಮಹಿಳೆಯರಲ್ಲಿ ಆತ್ಮವಿಶ್ವಾಸ, ಧೈರ್ಯ ಮೂಡಿಸಿ ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಯೋಜನೆ ವತಿಯಿಂದ ಗ್ರಾಮ ಗ್ರಾಮಗಳಲ್ಲಿ ಸಂಗಗಳು ಸ್ಥಾಪನೆಯಾಗಿ ಸಂಘಟನೆ ಯಾಗುತ್ತಿದೆ. ಸಂಸ್ಥೆ ಹಾಗೂ ಬ್ಯಾಂಕ್‍ಗಳ ಸಹಯೋಗದಿಂದ ಕುಟುಂಬ ಕಟ್ಟುವ ವ್ಯವಸ್ಥೆಯಾಗುತ್ತಿದೆ. ಪತಿ-ಪತ್ನಿಯರ ಚಿಂತನೆ ಒಂದೇ ಆದಾಗ ಕುಟುಂಬದಲ್ಲಿ ಸಂತಸ ತಾನಾಗಿಯೇ ಮೂಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಆರ್. ಸುರೇಶ್ ಮಾತನಾಡಿ, ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲೆಸಿ, ಉತ್ತಮ ಜೀವನದ ಕನಸನ್ನು ನನಸಾಗಿಸುವ ಸಂಸ್ಥೆಯೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಾಗಿದೆ. ಯೋಜನೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಗೌಡಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ, ಮುಖ್ಯ ಶಿಕ್ಷಕ ಒ.ಜೆ. ಗಣಪತಿ, ಪ್ರಮುಖರಾದ ಶರಣ್ ಕುಮಾರ್, ಹೊನ್ನ ರಾಜಪ್ಪ, ಪ್ರಕಾಶ್ಚಂದ್ರ, ಸೇವಾ ಪ್ರತಿನಿಧಿ ತಾರಾಮಣಿ, ಪ್ರಗತಿ ಬಂಧು ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಕುಮಾರ್, ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.