ಕುಶಾಲನಗರ: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಸಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವ್ಯಾಪಾರ ವಹಿವಾಟು, ಹಣಕಾಸಿನ ಬಗ್ಗೆ ಮಾಹಿತಿ ಒದಗಿಸುವ ಪ್ರಯತ್ನ ಶ್ಲಾಘನೀಯ. ಆಹಾರ ಉತ್ಪನ್ನಗಳ ಮಾರಾಟ ಸಂದರ್ಭ ಸ್ವಚ್ಛತೆ ಮತ್ತು ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ರಾಣಿ ಮಾತನಾಡಿ, ಶಾಲೆಯಲ್ಲಿ ಗ್ರಾಹಕರ ವೇದಿಕೆ ಸ್ಥಾಪಿಸಿದ್ದು ತರಗತಿಯಲ್ಲಿ ಗ್ರಾಹಕ ಹಾಗೂ ವ್ಯಾಪಾರಿಗಳ ಬಗ್ಗೆ ತಿಳಿಸಲಾಗುತ್ತಿದೆ. ಇದೀಗ ಪ್ರಾಯೋಗಿಕವಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಶಾಲೆಯ ವಿದ್ಯಾರ್ಥಿಗಳು ವಿವಿಧ ಬಗೆಯ ತಿಂಡಿ, ತಿನಿಸು, ಸೊಪ್ಪು, ತರಕಾರಿ, ಹಣ್ಣು-ಹಂಪಲು ಸೇರಿದಂತೆ ಸೌಂದರ್ಯವರ್ಧಕ ಉತ್ಪನ್ನಗಳ ಮಾರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ದೃಶ್ಯ ಕಂಡುಬಂತು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್, ಶಿಕ್ಷಕರುಗಳಾದ ಪ್ರಕಾಶ್, ಗಾಯತ್ರಿ, ಭಾರತಿ, ಉಷಾ, ಸರಳಾ, ಕಮಲಾ ಮತ್ತಿತರರು ಇದ್ದರು.

ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಶನಿವಾರಸಂತೆ: ಪಟ್ಟಣದ ಕಾವೇರಿ ವಿದ್ಯಾಸಂಸ್ಥೆಯಲ್ಲಿ ಶಾರದಾ ಪೂಜೆ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಸಮಾರಂಭದಲ್ಲಿ ವಿದ್ಯಾರ್ಥಿಗಳು‘ಓಂ’ಕಾರವನ್ನು ಪಠಿಸುವ ಮೂಲಕ ಶ್ರದ್ಧಾಭಕ್ತಿಯಿಂದ ಪೂಜಿಸಿದರು. ವಿದ್ಯಾಸಂಸ್ಥೆಯ ಪಿಯು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಪ್ರಾಂಶುಪಾಲ ಎಚ್.ಎನ್. ದೇವರಾಜ್ ಪರೀಕ್ಷೆ ಬಗೆಗಿನ ಭಯವನ್ನು ದೂರ ಮಾಡಿ ಸಲಹೆ, ಸೂಚನೆ ನೀಡಿದರು. ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಜಿ.ಎಂ. ಹೂವಯ್ಯ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.