ಮಡಿಕೇರಿ, ಫೆ. 7: ಕಾರ್ಮಿಕರು ರಾಷ್ಟ್ರದ ಸಂಪತ್ತು. ಶ್ರಮಿಕ ವರ್ಗದವರ ಶ್ರಮ ರಾಜ್ಯದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದೆ. ಬಹುತೇಕ ಅಸಂಘಟಿತರಾಗಿರುವ ಕಾರ್ಮಿಕ ವರ್ಗದವರನ್ನು ಸಂಘಟನೆಗೊಳಿಸುವದು ಸರ್ಕಾರದ ಆಶಯವಾಗಿದೆ. ಅಸಂಘಟಿತ ಕೆಲಸಗಾರರನ್ನು ಗುರುತಿಸಿ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ಮತ್ತಿತರ ಸರ್ಕಾರದ ಸೌಲಭ್ಯಗಳನ್ನು ನೀಡುವದಾಗಿದೆ.

ಸರ್ಕಾರ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಒತ್ತು ನೀಡಿದೆ. ಕಾರ್ಮಿಕ ಕಲ್ಯಾಣ ಮಂಡಳಿ, ಕಾರ್ಮಿಕ ಕಲ್ಯಾಣ ಯೋಜನೆ ಜೊತೆಗೆ ವೃತ್ತಿಪರ ಕೌಶಲ್ಯ ತರಬೇತಿ ನೀಡುತ್ತಿದೆ. ಇದರಿಂದಾಗಿ ಕೌಶಲ್ಯ ಹೊಂದಿರುವ ಕಾರ್ಮಿಕರು ಹೆಚ್ಚಿನ ಆದಾಯಗಳಿಸಲು ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದೆ. ಕಾರ್ಮಿಕ ಕಲ್ಯಾಣ ಮಂಡಳಿಯ ಸಹಯೋಗದೊಡನೆ ನಿರ್ಮಾಣ ಕೈಗಾರಿಕಾ ಕ್ಷೇತ್ರಗಳಲ್ಲಿ ಕೌಶಲ್ಯ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು ಒತ್ತು ನೀಡಿದೆ.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಳೆದ ನಾಲ್ಕುವರೆ ವರ್ಷಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು 18 ರಿಂದ 60 ವರ್ಷದೊಳಗಿನವರಾಗಿದ್ದು, ಕಾರ್ಮಿಕಾಧಿಕಾರಿಗಳು, ವಿವಿಧ ಕಾರ್ಮಿಕ ನಿರ್ದೇಶಕರು ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ.

ಕಾಮಗಾರಿ ನಡೆಯುವ ಕಟ್ಟಡ ಮಾಲೀಕರು, ಗುತ್ತಿಗೆದಾರರು ನೀಡುವಂತಹ ಉದ್ಯೋಗ ದೃಢೀಕರಣ ಪತ್ರ, ಅಥವಾ ಹಿರಿಯ ಕಾರ್ಮಿಕ ಕಚೇರಿಯಲ್ಲಿ ನೀಡುವಂತಹ ಉದ್ಯೋಗದ ದೃಢೀರಣ ಪತ್ರ, ಅಥವಾ ಪಂಚಾಯಿತಿ ಅಧಿಕಾರಿಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನೀಡುವ ಅಥವಾ ಕಾರ್ಯದರ್ಶಿಗಳು ನೀಡುವ ದೃಢೀಕರಣ ಪತ್ರ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.

ಇಂತಹ ಕಟ್ಟಡ ಕಾರ್ಮಿಕರಿಗೆ 3 ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದವರಿಗೆ ಮಾಸಿಕ 1,000 ಪಿಂಚಣಿ ಸೌಲಭ್ಯ, ಕಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳಿಂದ ಆಗುವ ಅಪಘಾತಗಳಿಗೆ ಶಾಶ್ವತ ಅಥವಾ ಭಾಗಶಃ ಅಂಗವಿಕಲರಾಗಿದ್ದರೆ ಮಾಸಿಕ ಪಿಂಚಣಿ 1000 ರೂ, ಶೇಕಡಾವಾರು ದುರ್ಬಲತೆಯನ್ನು ಆಧರಿಸಿ ರೂ. 2 ಲಕ್ಷ ಸಹಾಯ ಧನ, ಟ್ರೈನಿಂಗ್ ಕಮ್ ಟೂಲ್ ಕಿಟ್ ಸೌಲಭ್ಯ ಹಾಗೂ ರೂ. 2 ಲಕ್ಷವರೆಗೆ ಮನೆ ಖರೀದಿ ಮತ್ತು ಕಟ್ಟುವ ಸಹಾಯಧನ (ಕಾರ್ಮಿಕ ಗೃಹ ಭಾಗ್ಯ, ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ. 30,000 ಮತ್ತು ಗಂಡು ಮಗುವಿನ ಜನನಕ್ಕೆ ರೂ. 20,000 ನೀಡುವ ಸೌಲಭ್ಯವಿದೆ.

ಶೈಕ್ಷಣಿಕ ಸಹಾಯಧನ: ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 4, 5, ಮತ್ತು 6 ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 3,000. 7 ಹಾಗೂ 8ನೇ ತರಗತಿ ಉತ್ತೀರ್ಣರಾದವರಿಗೆ ರೂ. 4,000, 9, 10, ನೇ ತರಗತಿ ಹಾಗೂ ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ ರೂ. 6,000 ದ್ವಿತೀಯ ಪಿ.ಯು.ಸಿ. ಉತ್ತೀರ್ಣರಾದವರಿಗೆ ರೂ. 8,000, ಐಟಿಐ ಮತ್ತು ಡಿಪ್ಲೋಮಾ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ. 7,000 ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ. 10,000 ಸಾವಿರ, ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ. 20,000 ಹಾಗೂ ಪ್ರತಿ ವರ್ಷ ರೂ. 10,000 ಗಳಂತೆ (ಎರಡು ವರ್ಷಗಳಿಗೆ), ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ. 25,000 ಹಾಗೂ ಪ್ರತಿ ವರ್ಷ ತೇರ್ಗಡೆಗೆ ರೂ. 20,000, ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ. 30,000 ಹಾಗೂ ಪ್ರತಿ ವರ್ಷ ತೇರ್ಗಡೆಗೆ ರೂ. 25,000, ಪಿಎಚ್.ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ. 20,000 (ಗರಿಷ್ಠ ಎರಡು ವರ್ಷಗಳು) ಮತ್ತು ಪಿಎಚ್.ಡಿ ಪ್ರಬಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ. 20,000.

ಪ್ರತಿಭಾವಂತ ಮಕ್ಕಳಿಗಾಗಿ: ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ತರಗತಿಯಲ್ಲಿ ಶೇ. ಅಂಕ ಪಡೆದವರಿಗೆ ರೂ. 7,000, ಪಿ.ಯು.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ. 75 ರಷ್ಟು ಅಂಕ ಪಡೆದವರಿಗೆ ರೂ. 5,000, ಪದವಿ ಅಥವಾ ತತ್ಸಮಾನ ಕೋರ್ಸ್‍ಗಳಲ್ಲಿ ಶೇ. 75 ಅಂಕ ಪಡೆದವರಿಗೆ ರೂ. 10,000 ಹಾಗೂ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್‍ಗಳಲ್ಲಿ ಶೇ. 75 ಅಂಕ ಪಡೆದವರಿಗೆ ರೂ. 15.000, ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ): ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ ರೂ. 300 ರಿಂದ 10,000. ಅಪಘಾತ ಪರಿಹಾರ: ಮರಣ ಹೊಂದಿದ್ದಲ್ಲಿ ರೂ. 50,000 ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ರೂ. 2 ಲಕ್ಷ ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ರೂ. 1 ಲಕ್ಷಗಳವರೆಗೆ ಸಹಾಯ ಧನ ನೀಡಲಾಗುತ್ತದೆ. ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ): ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರ ಚಿಕಿತ್ಸೆ, ಪಾಶ್ರ್ವವಾಯು, ಮೂಳೆ ಶಸ್ತ್ರ ಚಿಕಿತ್ಸೆ, ಗರ್ಭಕೋಶ ಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಸಿದ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ. ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನದಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತ ಅಥವಾ ಡಿಸ್ ಲೋಕೇಶನ್ ಚಿಕಿತ್ಸೆ, ಸಾಮಾನ್ಯ ಶಸ್ತ್ರ ಚಿಕಿತ್ಸೆಗಳಿಗೆ ರೂ. 2 ಲಕ್ಷ ಭರಿಸಲಾಗುತ್ತದೆ.

ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್) ಫಲಾನುಭವಿ ಅಥವಾ ಇಬ್ಬರ ಮಕ್ಕಳ ಮದುವೆಗೆ ತಲಾ ರೂ. 50,000, ಕಾರ್ಮಿಕ ಅನಿಲ ಭಾಗ್ಯ ಸಂಪರ್ಕ ಸೌಲಭ್ಯ: ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟೌವ್ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಸಿಲಿಂಡರ್ ರೀಫಿಲ್, ಕೆಎಸ್‍ಆರ್‍ಟಿಸಿ ಬಸ್ ಪಾಸ್ ಸೌಲಭ್ಯವು ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರ ಮಕ್ಕಳಿಗೆ ನೀಡಲಾಗುವದು.

ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಮಂಜೂರಾತಿ ನೀಡಲಾಗಿದೆ. ಶೈಕ್ಷಣಿಕ ಧನ ಸಹಾಯದಡಿ 252 ಮಂದಿಗೆ ರೂ. 19,03,284, ಹೆರಿಗೆ ಭತ್ಯೆ ಧನ ಸಹಾಯದಡಿ ಒಬ್ಬರಿಗೆ ರೂ. 15,000, ವೈದ್ಯಕೀಯ ಧನ ಸಹಾಯದಡಿ ಇಬ್ಬರಿಗೆ ರೂ. 1,000, ಪ್ರಮುಖ ವೈದ್ಯಕೀಯ ಧನ ಸಹಾಯದಡಿ 7 ಮಂದಿಗೆ ರೂ. 3,66,670 ಹಾಗೂ ಮದುವೆ ಸಹಾಯಧನದಡಿ 26 ಮಂದಿಗೆ ರೂ. 13,00,016 ಮಂಜೂರಾಗಿದೆ. ಒಟ್ಟಾರೆ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳಡಿ 288 ಫಲಾನುಭವಿಗಳಿಗೆ ರೂ. 35,85,970 ಗಳನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ತಿಳಿಸಿದ್ದಾರೆ.