ಮಡಿಕೇರಿ, ಫೆ. 7: ಅರ್ಜುನ್ ಫ್ರೆಂಡ್ಸ್ ಬಿಳಿಗೇರಿ, ಇವರ ವತಿಯಿಂದ ಆಯೋಜಿಸಲಾಗಿದ್ದ ದ್ವಿತೀಯ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ನಗರದ ಮ್ಯಾನ್ಸ್ ಕಾಂಪೌಡ್ ಮೈದಾನದಲ್ಲಿ ನಡೆಯಿತು.

ಪಂದ್ಯಾಟ ಮೂರು ದಿನಗಳ ಕಾಲ ನಡೆದು ಅಂತಿಮವಾಗಿ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು. ಫೈನಲ್ ಪಂದ್ಯಾಟಕ್ಕೆ ಬ್ಯಾಟ್ ಮಾಡುವ ಮೂಲಕ ಗ್ರಾ.ಪಂ. ಸದಸ್ಯೆ ಪುಷ್ಪ ನಾಣಯ್ಯ ಚಾಲನೆ ನೀಡಿದ್ದರು. ಟೀಮ್ ಮ್ಯಾಕ್ಸ್‍ವೆಲ್ ಮತ್ತು ಬಂಟ್ಸ್ ಇಲೆವನ್ ಕೊಡಗು ತಂಡಗಳ ನಡುವೆ 5 ಓವರ್‍ಗಳ ಫೈನಲ್ ಪಂದ್ಯಾಟ ನಡೆಯಿತು. ಮ್ಯಾಕ್ಸ್‍ವೆಲ್ ತಂಡ ಟಾಸ್ ಗೆದ್ದು ಬೌಲಿಂಗ್‍ನ್ನು ಆಯ್ಕೆ ಮಾಡಿಕೊಂಡಿತು. ಟೀಮ್ ಮ್ಯಾಕ್ಸ್‍ವೆಲ್ ಬಂಟ್ಸ್ ಇಲೆವನ್ ಕೊಡಗು ನೀಡಿದ್ದ 36 ರನ್‍ಗಳ ಗುರಿಯನ್ನು 2 ಓವರ್‍ಗಳಲ್ಲಿ ಪಡೆದುಕೊಳ್ಳುವ ಮೂಲಕ ಜಯಭೇರಿಯನ್ನು ಸಾಧಿಸಿತು. ದ್ವಿತೀಯ ಬಹುಮಾನವನ್ನು ಬಂಟ್ಸ್ ಇಲೆವನ್ ಕೊಡಗು ತಂಡ ಪಡೆದುಕೊಂಡಿತು.

ಗ್ರಾ.ಪಂ. ಸದಸ್ಯೆ ಪುಷ್ಪ ನಾಣಯ್ಯ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ರೀತಿಯ ಕ್ರೀಡಾಕೂಟವನ್ನು ಅರ್ಜುನ್ ಫ್ರೆಂಡ್ಸ್ ಆಯೋಜಿಸಿರುವದು ಉತ್ತಮ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಈ ಆಯೋಜಕರ ವತಿಯಿಂದ ಕ್ರಿಕೆಟ್ ಪಂದ್ಯಾಟ ಮಾತ್ರವಲ್ಲದೆ ಇನ್ನೂ ಹಲವಾರು ಕ್ರೀಡೆಗಳನ್ನು ಆಯೋಜಿಸು ವಂತಾಗಲಿ. ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರಕುವಂತಾಗಲಿ ಎಂದರು. 2 ದಿನ ನಡೆದ ಪಂದ್ಯಾಟ ದಲ್ಲಿ 30 ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ಅಂತಿಮವಾಗಿ 4 ತಂಡಗಳು ಸೆಮಿಫೈನಲ್‍ಗೆ ಆಯ್ಕೆಯಾಗಿದ್ದವು.

ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ ರೂ. 15 ಸಾವಿರ ನಗದು, ಟ್ರೋಫಿಯನ್ನು ಟೀಮ್ ಮ್ಯಾಕ್ಸ್‍ವೆಲ್ ಪಡೆದುಕೊಂಡರೆ, ದ್ವಿತೀಯ ಬಹುಮಾನವಾಗಿ ರೂ. 7 ಸಾವಿರ ನಗದು, ಟ್ರೋಫಿಯನ್ನು ಬಂಟ್ಸ್ ಇಲೆವನ್ ಕೊಡಗು ತನ್ನ ಮುಡಿಗೇರಿಸಿಕೊಂಡಿತು.

ಪಂದ್ಯಾಟದಲ್ಲಿ ಅರ್ಜುನ್ ಫ್ರೆಂಡ್ಸ್‍ನ ಅಧ್ಯಕ್ಷ ನವೀನ್ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರೋಪ ಸಮಾರಂಭದಲ್ಲಿ ಅನುಭವಿ ಆಟಗಾರರಾದ ಜಗದೀಶ್, ರದೀಶ್ ಮತ್ತು ಪ್ರಮುಖರಾದ ಬಿ.ಸಿ. ನಾಣಯ್ಯ, ಹರೀಶ್ ರೈ, ರಾಧ ಉಪಸ್ಥಿತರಿದ್ದರು. ಅರ್ಜುನ್ ಕ್ರಿಕೆಟರ್ಸ್ ಪದಾಧಿಕಾರಿಗಳು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪಂದ್ಯಾವಳಿಯಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಟೀಮ್ ಮ್ಯಾಕ್ಸ್‍ವೆಲ್‍ನ ಸಂತೋಷ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಟೀಮ್ ಮ್ಯಾಕ್ಸ್‍ವೆಲ್‍ನ ಯತೀಶ್, ಉತ್ತಮ ಬ್ಯಾಟ್ಸ್‍ಮನ್ ಪ್ರಶಸ್ತಿಯನ್ನು ಬಂಟ್ಸ್ ಇಲೆವನ್ ಕೊಡಗು ತಂಡದ ಆಟಗಾರ ನಿಖಿಲ್ ಆಳ್ವ ಪಡೆದುಕೊಂಡರೆ, ಉದಯೋನ್ಮುಖ ಆಟಗಾರನಾಗಿ ಅರ್ಜುನ್ ಕ್ರಿಕೆಟರ್ಸ್ ತಂಡದ ನಿಶಾನ್ ಪಡೆದುಕೊಂಡರು.