ಪೊನ್ನಂಪೇಟೆ, ಫೆ. 7: ಪಶ್ಚಿಮಘಟ್ಟ ಸಂರಕ್ಷಣೆ ಕುರಿತ ಕಸ್ತೂರಿ ರಂಗನ್ ವರದಿ ವಿರೋಧಿಸಿ 2014ರಲ್ಲಿ ನಡೆದ ಕೊಡಗು ಬಂದ್ ಸಂದರ್ಭ ರಸ್ತೆ ತಡೆ ಪ್ರಕರಣ ಸಂಬಂಧ 3 ವರ್ಷಗಳಿಂದ ವಿಚಾರಣೆ ಎದುರಿಸುತ್ತಿದ್ದ 31 ಮಂದಿಯನ್ನು ಇಂದು ವೀರಾಜಪೇಟೆ ನ್ಯಾಯಾಲಯ ಆರೋಪಮುಕ್ತಗೊಳಿಸಿ ತೀರ್ಪು ನೀಡಿದೆ.
ಕಸ್ತೂರಿ ರಂಗನ್ ವರದಿ ವಿರೋಧಿಸಿ ತಾ. 3.12.2014 ರಂದು ಕೊಡಗು ಬಂದ್ ವೇಳೆ ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ಬಿ.ಶೆಟ್ಟಿಗೇರಿ ಜಂಕ್ಷನ್ ಬಳಿ ರಸ್ತೆತಡೆ ನಡೆಸಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿತ್ತು. ಈ ಸಂಬಂಧ ವೀರಾಜಪೇಟೆ ಗ್ರಾಮಾಂತರ ಪೊಲೀಸರು ರಸ್ತೆ ತಡೆ ನಡೆಸಿದ್ದ 31 ಮಂದಿ ವಿರುದ್ದ ಪ್ರಕರಣ ದಾಖಲಿಸಿ ವೀರಾಜಪೇಟೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಕಳೆದ 3 ವರ್ಷಗಳಿಂದÀ ವೀರಾಜಪೇಟೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ಮಧ್ಯೆ ಪ್ರಕರಣ ಇತ್ಯರ್ಥವಾಗುವದು ವಿಳಂಬವಾಗುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಟ್ಟಂಗಾಲ ಕ್ಷೇತ್ರದ ಜಿ.ಪಂ. ಮಾಜಿ ಸದಸ್ಯ ಕೊಡಂದೇರ ಬಾಂಡ್ ಗಣಪತಿ ತಮ್ಮ ವಕೀಲ ಕರ್ನಂಡ ರಾಹುಲ್ ಕಾರ್ಯಪ್ಪ ಮೂಲಕ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಇತ್ತೀಚೆಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತು ವಾದ-ವಿವಾದ ಆಲಿಸಿದ ಉಚ್ಛ ನ್ಯಾಯಾಲಯ ಇದೊಂದು ಸಾರ್ವಜನಿಕ ಹಿತಾಸÀಕ್ತಿಯ ಪ್ರಕರಣವಾದ್ದರಿಂದ ಕೆಳಹಂತದಲ್ಲಿ ವಿಚಾರಣೆ ನಡೆಸುತ್ತಿರುವ ವೀರಾಜಪೇಟೆ ನ್ಯಾಯಾಲಯವೇ ಮುಂದಿನ 90 ದಿನಗಳೊಳಗಾಗಿ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ತಾ. 6.12.2017 ರಂದು ಆದೇಶಿಸಿ ತೀರ್ಪು ನೀಡಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ವೇಗವಾಗಿ ವಿಚಾರಣೆ ನಡೆಸಿದ ವೀರಾಜಪೇಟೆ ನ್ಯಾಯಾಲಯದ ನ್ಯಾಯಾಧೀಶರು ಇಂದು ತೀರ್ಪು ಪ್ರಕಟಿಸಿ, ಯಾವದೇ ಸೂಕ್ತ ಸಾಕ್ಷ್ಯವಿಲ್ಲದ್ದರಿಂದ ಎಲ್ಲಾ 31 ಮಂದಿಯನ್ನು ಆರೋಪದಿಂದ ಮುಕ್ತಗೊಳಿಸಿದ್ದಾರೆ.
-ವರದಿ: ರಫೀಕ್ ತೂಚಮಕೇರಿ