ಪೊನ್ನಂಪೇಟೆ, ಫೆ. 7: ವರ್ಷಂಪ್ರತಿ ಜರುಗುವ ಅಂಬಟ್ಟಿ ಮಖಾಂ ಉರೂಸ್ ಕಾರ್ಯಕ್ರಮವು ತಾ. 9 ರಿಂದ 13 ರವರೆಗೆ ವಿವಿಧ ಧಾರ್ಮಿಕ ವಿಧಾನಗಳೊಂದಿಗೆ ನಡೆಯಲಿದೆ. ಒಟ್ಟು 5 ದಿನಗಳ ಕಾಲ ನಡೆಯುವ ಅಂಬಟ್ಟಿ ಉರೂಸ್‍ನಲ್ಲಿ ಜಾತಿ ಮತಗಳ ಬೇಧವಿಲ್ಲದೆ ಸಾವಿರಾರು ವಿಶ್ವಾಸಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅಂಬಟ್ಟಿ ಜಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಪಿ. ಶಾದಲಿ ಹಾಜಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 9 ರಂದು ಜುಮಾ ನಮಾಝ್ ನಂತರ ಮಖಾಂ ಅಲಂಕಾರ ಜರುಗಲಿದೆ. ಅಂಬಟ್ಟಿ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಸಲಾಮ ಹಳ್‍ರಮಿ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದ ಬಳಿಕ ಅಂಬಟ್ಟಿ ಜುಮಾ ಮಸೀದಿಯ ಅಡಳಿತ ಮಂಡಳಿ ಅಧ್ಯಕ್ಷರು ದ್ವಜಾರೋಹಣ ನೆರವೇರಿಸುವ ಮೂಲಕ ಅಂಬಟ್ಟಿ ಉರೂಸ್‍ಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುವದು. ಬಳಿಕ ಅಂದು ರಾತ್ರಿ ಧಾರ್ಮಿಕ ಕಾರ್ಯಕ್ರಮವಿರುತ್ತದೆ ಎಂದರು.
ತಾ. 10 ರಂದು ರಾತ್ರಿ 7 ಗಂಟೆಗೆ ಅಂಬಟ್ಟಿ ಸ್ವಲಾತ್ ವಾರ್ಷಿಕ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮವಿದೆ. ಇದಕ್ಕೆ ಮತ ಪಂಡಿತರಾದ ಕಮರುದ್ದೀನ್ ಸಖಾಫಿ ಅವರು ನೇತೃತ್ವ ನೀಡಲಿದ್ದಾರೆ. ಮಂಗಳೂರಿನ ಉದಯೋನ್ಮುಖ ಯುವ ಗಾಯಕÀ ಸಿಹಾನ್ ಅವರು ಬುರ್ದಾ ಮಜ್ಲಿಸ್ ಅನ್ನು ನಡೆಸಿಕೊಡಲಿದ್ದಾರೆ. ಅಂದು ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಅಂಬಟ್ಟಿ ಉಸ್ತಾದ್ ನೇತೃತ್ವ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ ಶಾದಲಿ ಹಾಜಿ ಅವರು, ತಾ.11 ರಂದು ರಾತ್ರಿ 7 ಗಂಟೆಗೆ ಉದ್ಬೋದನೆ ಮತ್ತು ದಿಕ್ರ್ ದುಆ ಸಮ್ಮೇಳನ ನಡೆಯಲಿದೆ. ದುಆ ಸಮ್ಮೇಳನಕ್ಕೆ ಎಮ್ಮೆಮಾಡಿನ ಅಸ್ಸಯದ್ ಸಾಲಿಂ ತಂಙಳ್ ಅವರು ನೇತೃತ್ವ ನೀಡಲಿದ್ದಾರೆ. ಅಂದು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವಿದ್ದು, ಧಾರ್ಮಿಕ ವಿದ್ವಾಂಸ ನೌಫಲ್ ಸಖಾಫಿ ಕಳಸ ಅವರು ಭಾಗವಹಿಸಿ ‘ಮರಣ ಮತ್ತು ನಂತರದ ಜೀವನ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಈ ಎಲ್ಲ ಧಾಮಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಆಸನಗಳ ವ್ಯವಸ್ಥೆ ಮಾಡಲಾಗುವದು ಎಂದು ವಿವರಿಸಿದರು.
ತಾ.12 ರಂದು ಉರೂಸ್‍ನ ಪ್ರಮುಖ ಕಾರ್ಯಕ್ರಮ ಅಯೋಜಿಸಲಾಗಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಕೊಡಗು ಜಿಲ್ಲಾ ನಾಇಬ್ ಖಾಝಿಗಳಾದ ಎಡಪಾಲದ ಕೆ.ಎಂ. ಮೊಹಮ್ಮದ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಮಹಾ ಸಂಗಮ ಕಾರ್ಯಕ್ರಮ ನಡೆಯಲಿದ್ದು, ವೀರಾಜಪೇಟೆಯ ಅನ್ವಾರುಲ್ ಹುದಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಅಶ್ರಫ್ ಅಹಸನಿ ಉದ್ಘಾಟಿಸಲಿದ್ದಾರೆ. ಪ್ರಧಾನ ಭಾಷಣಕಾರರಾಗಿ ದಕ್ಷಿಣ ಭಾರತದ ಧಾರ್ಮಿಕ ಪ್ರಭಾಷಕ ಅಬ್ದುಲ್ ರಶೀದ್ ಝೈನಿ ಅಲ್‍ಕಾಮಿಲ್ ಸಖಾಫಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಟ್ಟಂಗಾಲ ಗ್ರಾ.ಪಂ. ಅಧ್ಯಕ್ಷ ಪುಚ್ಚಿಮಂಡ ಸಾಬ ಬೆಳ್ಯಪ್ಪ, ಗ್ರಾ.ಪಂ. ಸದಸ್ಯ ಬಿ.ಅರ್. ದಿನೇಶ್, ಕೊಡಗು ಜಿಲ್ಲಾ ವಕ್ಫ್ ಮಂಡಳಿಯ ಕಾರ್ಯದರ್ಶಿ ಸಾದಾತ್, ಕಾಂಗ್ರೆಸ್ ಮುಖಂಡ ಪಿ.ಎಂ. ಹನೀಪ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಶಾದಲಿ ಹಾಜಿ ಅವರು, ಸಂಜೆ 4 ಗಂಟೆಗೆ ಜರುಗುವ ಮೌಲೂದ್ ಪಾರಾಯಣದ ಬಳಿಕ ಅಂದು ಸೇರುವ ಸಾವಿರಾರು ಜನತೆಗೆ ಸಾಮೂಹಿಕವಾಗಿ ಅನ್ನ ಸಂತರ್ಪಣೆ ಮಾಡಲಾಗುವದು ಎಂದು ತಿಳಿಸಿದರು.
ಗೋಷ್ಠಿಯಲ್ಲಿದ್ದ ಜಮಾಯತ್ ಆಡಳಿತ ಮಂಡಳಿ ಸದಸ್ಯ ಎಂ.ಕೆ. ಮುಸ್ತಾಫ ಅವರು ಮಾತನಾಡಿ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅಂಬಟ್ಟಿ ಮಖಾಂ ಉರೂಸ್ ಜನರ ಧಾರ್ಮಿಕ ಶ್ರದ್ದಾ ಕೇಂದ್ರವಾಗಿ ರೂಪುಗೊಂಡು ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಈ ಕಾರಣದಿಂದಲೇ ಪ್ರತೀವಾರ ಇಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್‍ಗೆ ಜಾತಿ ಮತಗಳ ಬೇಧವಿಲ್ಲದೆ ನಾನಾ ಭಾಗಗಳಿಂದ ಸಾವಿರಾರು ವಿಶ್ವಾಸಿಗಳು ಭಾಗವಹಿಸುತ್ತಿದ್ದಾರೆ. ಅಂಬಟ್ಟಿ ಮಖಾಂ ವಿವಿಧ ಧರ್ಮದವರ ಸಹೋದರತೆಯನ್ನು ಸಾರುವ ಭಾವೈಕ್ಯತೆಯ ಕೇಂದ್ರವೂ ಹೌದು ಎಂದು ಹೇಳಿದರು.
ಗೋಷ್ಠಿಯಲ್ಲಿ ಜಮಾಯತ್‍ನ ಆಡಳಿತ ಮಂಡಳಿ ಪದಾಧಿಕಾರಿಗಳಾದ ಎಂ.ಎ. ಶಾನು, ಕೆ.ಯೂಸುಫ್. ಕೆ. ಷರೀಫ್, ಆಲೀರ ಸಾದಲಿ ಮತ್ತು ಪಿ.ಸಿ. ಅಬ್ಬಾಸ್ ಉಪಸ್ಥಿತರಿದ್ದರು.