ಮಡಿಕೇರಿ, ಫೆ. 7: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಿದ್ಧತೆ ಬಗ್ಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನವನ್ನು ಎಲ್ಲಾ ಅಧಿಕಾರಿಗಳು ಚಾಚುತಪ್ಪದೆ ಪಾಲಿಸ ಬೇಕು. ಚುನಾವಣಾ ಆಯೋಗವು ಕಾಲಕಾಲಕ್ಕೆ ಹೊರಡಿಸುವ ಆದೇಶಗ ಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ವಿಕಲಚೇತರಿಗೆ ರ್ಯಾಂಪ್ ವ್ಯವಸ್ಥೆ, ಶೌಚಾಲಯ ಮತ್ತಿತರ ಮೂಲ ಸೌಲಭ್ಯಗಳಿರಬೇಕು. ಆ ನಿಟ್ಟಿನಲ್ಲಿ ಶಾಲಾ ಕಾಲೇಜು, ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಈ ಕಾರ್ಯ ಗಳನ್ನು ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯ ಕೆಲವು ಮತಗಟ್ಟೆ ಕೇಂದ್ರ ವ್ಯಾಪ್ತಿಯಲ್ಲಿ ದೂರವಾಣಿ ಸಂಪರ್ಕವಿಲ್ಲ. ಇಂತಹ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ದೂರವಾಣಿ ಸಂಪರ್ಕ ಕಲ್ಪಿಸುವಂತೆ ಬಿ.ಎಸ್.ಎನ್.ಎಲ್ ಅಧಿಕಾರಿಗಳಿಗೆ ಪಿ.ಐ. ಶ್ರೀವಿದ್ಯಾ ನಿರ್ದೇಶನ ನೀಡಿದರು.

ಹಣ ಚಲಾವಣೆಗೆ ಸಂಬಂಧಿಸಿ ದಂತೆ ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರು ನಿಗಾವಹಿಸಬೇಕು. ವಾಣಿಜ್ಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕಾರ್ಯ ಚಟುವಟಿಕೆಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ನಿರ್ವಹಿಸಬೇಕು ಎಂದು ಅವರು ಸೂಚನೆ ನೀಡಿದರು.

ಚುನಾವಣೆಗೆ ಸಂಬಂಧ ಲೆಕ್ಕ ಪರಿಶೀಲನಾ ತಂಡ ಆಗಮಿಸಲಿದೆ. ಆ ಸಂದರ್ಭ ಚುನಾವಣೆಗೆ ವೆಚ್ಚ ಮಾಡಿರುವ ಬಗ್ಗೆ ಅಂಕಿಅಂಶ ಸಹಿತ ಮಾಹಿತಿ ಒದಗಿಸಬೇಕಿದೆ. ಈಗಿನಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.

ಅಬಕಾರಿ ಇಲಾಖೆ ಅಧಿಕಾರಿಗಳು ಗಡಿ ಭಾಗದ ಚೆಕ್ ಪೋಸ್ಟ್‍ಗಳಲ್ಲಿ ತಪಾಸಣೆ ನಡೆಸಬೇಕು. ಯಾವದೇ ರೀತಿಯ ಅಕ್ರಮಗಳಿಗೆ ಅವಕಾಶ ಮಾಡಬಾರದು, ಅಲ್ಲಲ್ಲಿ ತಪಾಸಣೆ ನಡೆಸುವಂತಾಗಲು ವೀಕ್ಷಣಾ ದಳ ನಿಯೋಜಿಸಿಕೊಳ್ಳಬೇಕು. ಅಬಕಾರಿ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಹೆಚ್ಚಿನ ತಪಾಸಣೆ ಮಾಡಬೇಕು ಎಂದು ಸೂಚನೆ ನೀಡಿದರು. ಜಿ.ಪಂ.ವತಿಯಿಂದ ಮತದಾರರ ಸಹಭಾಗಿತ್ವದಡಿ ಮತದಾನದ ಮಹತ್ವ, ಪಾಲ್ಗೊಳ್ಳುವಿಕೆ, ವಿವಿ ಪ್ಯಾಟ್ ಮತ್ತಿತರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಸಲಹೆ ಮಾಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಚುನಾವಣೆಗೆ ಬೇಕಿರುವ ವಾಹನಗಳ ವ್ಯವಸ್ಥೆ ಮಾಡಬೇಕಿದ್ದು, ಈ ಬಗ್ಗೆ ಈಗೀನಿಂದಲೇ ವಾಹನಗಳ ಮಾಹಿತಿ ಪಡೆಯುವದು, ಜೊತೆಗೆ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳುವಂತೆ ತಿಳಿಸಿದರು. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಸಲಾಗುತ್ತದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ರಾಮಪ್ಪ, ಉಪ ನಿರ್ದೇಶಕ ರಾಜು, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಭು, ಜಿ.ಪಂ. ಎಂಜಿನಿಯರ್ ರಾಜಕುಮಾರ ರೆಡ್ಡಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗುಪ್ತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಲ್ಲೇಶ್, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಪ್ರಧಾನ್, ಐ.ಟಿ.ಡಿ.ಪಿ ಇಲಾಖೆ ಅಧಿಕಾರಿ ಪ್ರಕಾಶ್, ತಹಶೀಲ್ದಾರ್ ಕುಸುಮ, ಗೋವಿಂದರಾಜು, ಚುನಾವಣಾ ಶಿರಸ್ತೆದಾರ ಪ್ರಕಾಶ, ಅನಿಲ್ ಕುಮಾರ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಇತರರು ಇದ್ದರು.