ಮಡಿಕೇರಿ, ಫೆ. 7: ಕೊಡಗು ಜಿಲ್ಲೆಗೆ ರೈಲ್ವೇ ಸಂಪರ್ಕ ಯೋಜನೆಯನ್ನು ವಿರೋಧಿಸಿ ತಾ. 18 ರಂದು ಮೈಸೂರಿನ ನೈಋತ್ಯ ರೈಲ್ವೇ ಕಚೇರಿ ಮುಂದೆ ಪ್ರತಿಭಟನೆಯೊಂದಿಗೆ ನಡೆಯಲಿರುವ ಹೋರಾಟ ಬೆಂಬಲಿಸುವಂತೆ ಕೊಡಗು ರೈಲ್ವೇ ವಿರೋಧಿ ಹೋರಾಟ ಸಮಿತಿ ಪ್ರಮುಖರು ಕರೆ ನೀಡಿದ್ದಾರೆ. ಈ ಸಂಬಂಧ ಇಲ್ಲಿನ ಕೊಡವ ಸಮಾಜದಲ್ಲಿ ಇಂದು ನಡೆದ ಸಭೆಯಲ್ಲಿ ಚರ್ಚಿಸಲಾಯಿತು.ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕೊಡಗು ವೈಲ್ಡ್ ಲೈಫ್ ಸಂಸ್ಥೆಯ ಅಧ್ಯಕ್ಷ (ನಿವೃತ್ತ ಕರ್ನಲ್) ಸಿ.ಪಿ. ಮುತ್ತಣ್ಣ ಅವರು, ರೈಲ್ವೇ ಯೋಜನೆಯಿಂದ ಎಲ್ಲ ರೀತಿಯಿಂದ ಕೊಡಗಿನ ಅಸ್ಥಿತ್ವಕ್ಕೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ವ್ಯಾಪಕ ಹೋರಾಟ ಅಗತ್ಯವೆಂದು ಪ್ರತಿಪಾದಿಸಿದರು.
ಈ ಹಿನ್ನೆಲೆಯಲ್ಲಿ ತಾ. 18 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ರೈಲ್ವೇ ಕಚೇರಿ ಬಳಿಯ ಜೆ.ಕೆ. ಮೈದಾನದಲ್ಲಿ ಎಲ್ಲರು ಸೇರುವಂತೆ ಮಾಹಿತಿ ನೀಡಿದ ಅವರು, ಅಲ್ಲಿಂದ ಪ್ರಮುಖ ಬೀದಿಗಳಲ್ಲಿ
(ಮೊದಲ ಪುಟದಿಂದ) ಮೆರವಣಿಗೆಯೊಂದಿಗೆ ರೈಲ್ವೇ ಇಲಾಖೆಗೆ ಜನತೆಯ ಪ್ರತಿಭಟನೆಯ ಸಂದೇಶ ರವಾನಿಸಲಾಗುವದು ಎಂದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಹಾಗೂ ಹೋರಾಟ ಸಮಿತಿ ಪ್ರಮುಖ ರಾಜೀವ್ ಬೋಪಯ್ಯ ಮಾತನಾಡಿ, ಕೊಡಗಿನ ಜನತೆಯ ಭಾವನೆಗಳಿಗೆ ವಿರುದ್ಧವಾಗಿ ರೈಲ್ವೇ ಯೋಜನೆ ರೂಪಿಸಲು ಅವಕಾಶವಾಗದಂತೆ ಎಲ್ಲರೂ ಒಗ್ಗೂಡಿ ಹೋರಾಟ ನಡೆಸುವ ಅಗತ್ಯವಿದೆ ಎಂದರು.
ಕಾವೇರಿ ಸ್ವಚ್ಛತಾ ಆಂದೋಲನ ಸಂಯೋಜಕ ಚಂದ್ರಮೋಹನ್ ಮಾತನಾಡಿ, ಕಾವೇರಿ ಉಳಿಯಬೇಕಾದರೆ ಪ್ರಕೃತಿ ಉಳಿಯಬೇಕೆಂದಲ್ಲದೆ, ರೈಲ್ವೇ ಯೋಜನೆಯಿಂದ ಪರಿಸರ ನಾಶವಾಗದಂತೆ ಹೋರಾಟ ರೂಪಿಸಬೇಕೆಂದು ಸಲಹೆ ನೀಡಿದರು.
ನಗರಸಭೆಯ ಮಾಜಿ ಅಧ್ಯಕ್ಷ ಎಂ.ಪಿ. ಮುತ್ತಪ್ಪ ಮಾತನಾಡಿ, ಕೊಡಗಿನ ಪರಿಸರ, ನೆಲ, ಜಲ, ಸಂಸ್ಕøತಿ ಉಳಿಯಬೇಕಾದರೆ ರೈಲ್ವೇಯಂತಹ ಯೋಜನೆಗೆ ಅವಕಾಶ ನೀಡಬಾರದು. ಆ ದಿಸೆಯಲ್ಲಿ ಎಲ್ಲರೂ ಸೇರಿ ಹೋರಾಡಬೇಕೆಂದರು.
ಪ್ರಮುಖರಾದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಎಂ.ಎಂ. ರವೀಂದ್ರ, ಮುರುಳಿ, ನಂದೇಟಿರ ರಾಜಮಾದಪ್ಪ ಅವರು ರೈಲ್ವೇ ವಿರೋಧಿ ಹೋರಾಟವನ್ನು ವ್ಯಾಪಕವಾಗಿ ನಡೆಸಲು ಸಲಹೆ ನೀಡಿದರಲ್ಲದೆ, ಹೋರಾಟದ ದಿಕ್ಕು ತಪ್ಪಿಸುವವರ ಬಗ್ಗೆ ಜಾಗೃತರಾಗಿರುವಂತೆಯೂ ಒತ್ತಿ ಹೇಳಿದರು.
ಸಮಾಜದ ಪದಾಧಿಕಾರಿಗಳಾದ ಟಿ.ಸಿ. ತಮ್ಮಯ್ಯ, ರಾಣಿ ಮಾಚಯ್ಯ, ಅಪ್ಪಾಜಿ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.