ಮಡಿಕೇರಿ, ಫೆ. 7: ಕೊಡಗಿನ ರಸ್ತೆ ದುಸ್ಥಿತಿ ಹಾಗೂ ರಸ್ತೆ ನಿರ್ವಹಣೆಗೆ ಅನುದಾನ ಮೀಸಲಿ ಟ್ಟಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ ಹಾಗೂ ಸುನಿಲ್ ಸುಬ್ರಮಣಿ ಅವರುಗಳು ಸದನದಲ್ಲಿ ಪ್ರಶ್ನಿಸುವ ಮೂಲಕ ಗಮನ ಸೆಳೆದಿದ್ದಾರೆ.ಸದಸ್ಯೆ ವೀಣಾ ಅಚ್ಚಯ್ಯ ಅವರು, ಸೋಮವಾರಪೇಟೆ ತಾಲೂಕಿನ ಮಾವಿನಕಟ್ಟೆ ಹಾಗೂ ಕಿಕ್ಕರಳ್ಳಿ ರಸ್ತೆ ತೀರಾ ಹಾಳಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಸರಕಾರ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಬಯಸಿದರು. ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು, ಮಾವಿನಕಟ್ಟೆ -ತಳ್ತರೆ - ಬಾರ್ಲಗದ್ದೆ - ಹರಗ- ಕಿಕ್ಕರಳ್ಳಿ ರಸ್ತೆ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, 12 ಲಕ್ಷದಲ್ಲಿ ನಿರ್ಮಿಸಲಾಗಿದ್ದು, 2015-16ರಲ್ಲಿ 92 ಲಕ್ಷದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ನಿರ್ವಹಣೆಗಾಗಿ ರೂ. 8ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ ಭಾಗವನ್ನು ಅನುದಾನದ ಲಭ್ಯತೆಗನುಗುಣವಾಗಿ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳುವದಾಗಿ ಮಾಹಿತಿ ನೀಡಿದರು.

ಕೊಡಗು ಜಿಲ್ಲೆಗೆ ರಸ್ತೆಗಳ ನಿರ್ವಹಣೆಗೆ ಮೀಸಲಿಟ್ಟಿರುವ ಹೆಚ್ಚುವರಿ ಅನುದಾನದ ಬಗ್ಗೆ ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಹದೇವಪ್ಪ ಅವರು, ಕೊಡಗು ಜಿಲ್ಲೆಯ ರಸ್ತೆಗಳ ನಿರ್ವಹಣೆಗೆ ಯಾವದೇ ಹೆಚ್ಚುವರಿ ಅನುದಾನ ಮೀಸಲಿಟ್ಟಿಲ್ಲ ಎಂದು ತಿಳಿಸಿದ್ದಾರೆ.

(ಮೊದಲ ಪುಟದಿಂದ) ರಾಜ್ಯ ಹೆದ್ದಾರಿ ನಿರ್ವಹಣೆಗೆ ಒಟ್ಟು ರೂ. 562.81 ಲಕ್ಷ ಬಿಡುಗಡೆಗೊಳಿಸಲಾಗಿದ್ದು, ಈ ಪೈಕಿ ಮಡಿಕೇರಿ ತಾಲೂಕಿಗೆ ರೂ. 120ಲಕ್ಷ ಸೋಮವಾರಪೇಟೆಗೆ 260 ಲಕ್ಷ, ವೀರಾಜಪೇಟೆಗೆ ರೂ. 182.81 ಲಕ್ಷ ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಹಾಗೂ ಇತರ ರಸ್ತೆ ನಿರ್ವಹಣೆಗೆ ಒಟ್ಟು ರೂ. 434.12 ಲಕ್ಷ ಬಿಡುಗಡೆ ಮಾಡಲಾಗಿದ್ದು, ಮಡಿಕೇರಿ ತಾಲೂಕಿಗೆ ರೂ. 148ಲಕ್ಷ, ಸೋಮವಾರಪೇಟೆ ತಾಲೂಕಿಗೆ ರೂ. 10 ಲಕ್ಷ, ವೀರಾಜಪೇಟೆ ತಾಲೂಕಿಗೆ ರೂ. 182.12 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.