ಶನಿವಾರಸಂತೆ, ಫೆ. 8: ಕೃಷಿ, ಪಶುಪಾಲನೆಗೂ ಜಾನುವಾರುಗಳ ಜಾತ್ರಾ ಮಹೋತ್ಸವಕ್ಕೂ ಅವಿನಾಭಾವ ಸಂಬಂಧ ಇದ್ದು, ಇಂದಿನ ಯುವ ಜನಾಂಗ ಜಾನಪದ ಸಂಸ್ಕøತಿ, ಸಾಹಿತ್ಯವನ್ನು ಮರೆಯಬಾರದು ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಕರೆ ನೀಡಿದರು.
ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ ಜಾತ್ರಾ ಸಮಿತಿ ಹಾಗೂ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ನಡೆದ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವದ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನದ ಪ್ರಭಾವ ದಿಂದಾಗಿ ಜಾನಪದ ಸಂಸ್ಕøತಿಯ ಪ್ರತೀಕವಾದ ಜಾನುವಾರುಗಳ ಜಾತ್ರಾ ಮಹೋತ್ಸವ ಕಳೆಗುಂದಲು ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಜಾತ್ರಾ ಸಂಸ್ಕøತಿ ನಶಿಸಿ ಹೋಗದಂತೆ ಯುವ ಜನಾಂಗ ಕಾರ್ಯೋನ್ಮುಖರಾಗಬೇಕೆಂದರು.
ಹೈಕೋರ್ಟ್ ನಿವೃತ್ತ ಸರ್ಕಾರಿ ಅಭಿಯೋಜಕ ಚಂದ್ರಮೌಳಿ ಮಾತನಾಡಿ, ಜಾತ್ರೆಯ ಗತವೈಭವ ವನ್ನು ಇಂದು ಮೆಲುಕು ಹಾಕುವಂತಾಗಿದೆ. ಎಷ್ಟೇ ಜಾಗತೀಕರಣವಾದರೂ ಹಳೆಯ ಜಾತ್ರಾ ಸಂಸ್ಕøತಿಯನ್ನು ಮರೆಯುವಂತಿಲ್ಲ. ಕೃಷಿ ಜೀವನದ ಸಾಮಾಗ್ರಿ ಬದಲಾದರೂ ರೈತರ ಜಾತ್ರಾ ಸಂಸ್ಕøತಿ ಬದಲಾಗಬಾರದು ಎಂದರು. ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತ ವಿರೂಪಾಕ್ಷಯ್ಯ ಮಾತನಾಡಿ, ಜಯದೇವ ಜಾತ್ರಾ ಮಹೋತ್ಸವ 73 ವರ್ಷಗಳ ಇತಿಹಾಸ ಹೊಂದಿದ್ದರೂ, ಜಾತ್ರಾ ಮೈದಾನಕ್ಕೆ ತಡೆಗೋಡೆಯೇ ಇಲ್ಲ. ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ಕೃಷಿ ಮೇಳದೊಂದಿಗೆ ಜಾತ್ರೆಯನ್ನು ಮಾಡಿದರೆ ಜಾತ್ರಾ ಮಹೋತ್ಸವ ಗತವವೈಭವ ಮರುಕಳಿಸಿಕೊಳ್ಳುತ್ತದೆ. ಸಂಬಂಧಗಳು ಸಂಕೀರ್ಣಗೊಳ್ಳುತ್ತಿರು ವಾಗ ಸಂಬಂಧ ಬೆಸೆಯಲು ರೈತರ ಮನರಂಜನೆಗಾಗಿ ಜಾತ್ರೆ ಅವಶ್ಯಕ ಎಂದರು.
ಜುಮಾ ಮಸೀದಿಯ ಗುರು ಸುಹೈಬ್ ಫೈಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪುಟ್ಟರಾಜ್, ಸರೋಜಮ್ಮ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಮಾತನಾಡಿ, ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಸಹಕಾರ ನೀಡುವ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಸಮಿತಿ ಅಧ್ಯಕ್ಷ ಬಸವರಾಜ್ ಬೆಳ್ಳಿ ಮಾತನಾಡಿ, ಮುಂಬರುವ ವರ್ಷಗಳಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಿತಿಯ ಸಹಕಾರ ದೊಂದಿಗೆ ಜಾತ್ರೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಲಾಗುವದು ಎಂದರು.
ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗಸ್ವಾಮೀಜಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್, ಉಪಾಧ್ಯಕ್ಷೆ ರೂಪಾ, ಸದಸ್ಯರು, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ಜಾತ್ರಾ ಸಮಿತಿ ಉಪಾಧ್ಯಕ್ಷೆ ನಿರ್ಮಲಾ, ಕಾರ್ಯದರ್ಶಿ ಶಿವಕುಮಾರ್, ನಿವೃತ್ತ ಶಿಕ್ಷಕ ಡಿ.ಬಿ. ಸೋಮಪ್ಪ, ಕಾಳಿಕಾಂಬ ದೇವಾಲಯ ಸಮಿತಿ ಅರ್ಚಕ ಲಕ್ಷ್ಮಣಾಚಾರ್ ಉಪಸ್ಥಿತರಿದ್ದರು.