ಗೋಣಿಕೊಪ್ಪ ವರದಿ, ಫೆ. 6 : ಮೊದಲ ಬಾರಿಗೆ ಫೈನಲ್ ಪ್ರವೇಶ ಪಡೆದಿದ್ದ ಹಾಕಿಕೂರ್ಗ್ ಸಬ್ ಜೂನಿಯರ್ ಬಾಲಕಿಯರ ತಂಡ ಅಂತಿಮ ಹಣಾಹಣಿಯಲ್ಲಿ ಸೋಲನುಭವಿಸುವ ಮೂಲಕ ಬೆಳ್ಳಿಗೆ ಮುತ್ತಿಕ್ಕಿದೆ. ಅಸ್ಸಾಂನ ಕಾಲಿಬೊರ್ ಮೈದಾನದಲ್ಲಿ ನಡೆದ 8 ನೇ ನ್ಯಾಷನಲ್ ಸಬ್ ಜೂನಿಯರ್ ಚಾಂಪಿಯನ್‍ಶಿಪ್ ಟೂರ್ನಿಯ ಫೈನಲ್‍ನಲ್ಲಿ ಅಸ್ಸಾಂ ವಿರುದ್ಧ 0-1 ಗೋಲುಗಳ ಅಂತರದಲ್ಲಿ ಸೋಲು ಕಂಡಿತು. ಫೈನಲ್‍ನಲ್ಲಿ ಕೊಡಗಿನ ತಂಡ ಗೋಲು ಗಳಿಸುವದರಲ್ಲಿ ವಿಫಲವಾಯಿತು. ಸರಣಿಯುದ್ದಕ್ಕೂ ಉತ್ತಮ ಆಟ ಪ್ರದರ್ಶಿಸಿದ್ದ ತಂಡ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನೊಂದಿಗೆ ಪ್ರದರ್ಶನ ನೀಡಿತು.
ಅಮೋಘ ಪ್ರದರ್ಶನ : ಪ್ರಶಸ್ತಿ ಗೆಲ್ಲುವಲ್ಲಿ ಎಡವಿದ ಕೂರ್ಗ್ ತಂಡ ಟೂರ್ನಿಯಲ್ಲಿ ಉತ್ತಮ ಆಟ ಪ್ರದರ್ಶಸಿತ್ತು. ಸಿಟಿಜನ್ ವಿರುದ್ಧ 6-0 ಗೋಲು, ಗುಜರಾತ್ ಹಾಕಿ ವಿರುದ್ಧ 10-0, ಮುಂಬಯಿ ವಿರುದ್ಧ 5-0, ಸೆಮಿಯಲ್ಲಿ 6-2 ಅಂತರದ ಗೆಲುವು ಹೆಚ್ಚಿನ ನಿರೀಕ್ಷೆ ಹೆಚ್ಚಿಸಿತ್ತು. ಟೂರ್ನಿಯಲ್ಲಿ ಪೊನ್ನಿಮಾಡ ಶಿಲ್ಪ ಹ್ಯಾಟ್ರಿಕ್ ಗೋಲುಗಳೊಂದಿಗೆ 9 ಗೋಲು, ಪಿ. ಯು. ರಮ್ಯ 6, ಜಿ. ಕಾವ್ಯ 6, ಎಂ.ಕೆ ಸುಜಾತ 2 ಗೋಲು ಬಾರಿಸಿ ಕೊಡಗಿಗೆ ಭವಿಷ್ಯದ ಉತ್ತಮ ಆಟಗಾರರು ಎನಿಸಿಕೊಂಡಿದ್ದಾರೆ. ಕೊಡಗಿನಲ್ಲಿ ನಡೆಯುತ್ತಿರುವ ಮಹಿಳಾ ಲೀಗ್‍ಗೆ ಇನ್ನಷ್ಟು ಪ್ರತಿಭಾಶಾಲಿ ಆಟಗಾರರನ್ನು ಕೊಡುವಂತೆ ಮಾಡಿದೆ.
ಬಡ್ತಿ : ಅಮೋಘ ಆಟದ ಮೂಲಕ
(ಮೊದಲ ಪುಟದಿಂದ) ‘ಬಿ’ ಡಿವಿಜನ್ ಟೂರ್ನಿಯಿಂದ ‘ಎ’ ಡಿವಿಜನ್‍ಗೆ ಬಡ್ತಿ ಪಡೆದುಕೊಂಡಿದೆ. ಕಳೆದ ಬಾರಿ ಮೂರನೇ ಸ್ಥಾನ ಅಲಂಕರಿಸಿದ್ದ ತಂಡ ಎ ಡಿವಿಜನ್‍ಗೆ ಮುಂಬಡ್ತಿ ಪಡೆಯಬೇಕಿತ್ತಾದರೂ ಅದು ನಡೆದಿರಲಿಲ್ಲ. ಆದರೆ ಈ ಬಾರಿ ಬಡ್ತಿ ಮೂಲಕ ಬೆಳ್ಳಿ ಪದಕದೊಂದಿಗೆ ಮುನ್ನಡೆದಿದೆ.
ಇತಿಹಾಸ ಸೃಷ್ಟಿಸಿದ ತಂಡ : ಚೊಚ್ಚಲ ಬಾರಿಗೆ ಕಪ್ ಗೆದ್ದಿರುವದು ಕೊಡಗಿನ ಹಾಕಿ ತಂಡ ಬೆಳ್ಳಿ ಕಪ್ ಗೆದ್ದು, ಕೊಡಗಿನ ಹಾಕಿ ಇತಿಹಾಸಕ್ಕೆ ಬೆಳ್ಳಿ ಚುಕ್ಕೆಯನ್ನಿಟ್ಟಿದೆ. ತಂಡದ ಆಟಗಾರರುಗಳಾದ (ನಾಯಕಿ) ಕೆ. ಎ. ಪಾರ್ವತಿ, ಹೆಚ್. ಡಿ. ನೇತ್ರಾವತಿ, ಎಂ. ಕೆ. ಸುಜಾತ, ಕೆ. ಎಸ್. ಅನ್ನಪೂರ್ಣ, ಡಿ. ಜೆ. ನವ್ಯ, ಶಯಾ ಕಾವೇರಮ್ಮ, ಹೆಚ್. ಎ. ಅಪ್ಸರಾ, ಪಿ. ಶಿಲ್ಪ, ಎಸ್. ಅದಿರಾ, ಕೆ. ಎಸ್. ಸುರಕ್ಷಾ, ಕೆ. ಕೆ. ಗೌತಮಿ, ಪಿ. ಯು. ರಮ್ಯ, ಜಿ. ಕಾವ್ಯ, ಹೆಚ್. ಎಸ್. ಜಾಹ್ನವಿ, ಸಿ. ಕೆ. ಪ್ರಗತಿ, ಟಿ. ಸಿ ಸುಚಿತ್ರಾ, ಎಸ್. ಹೆಚ್. ಬೃಂದಾ, ಬಿ. ಜಿ. ಜೀವಿತಾ ಉತ್ತಮ ಆಟ ಪ್ರದರ್ಶಿಸಿದರು. ತರಬೇತುದಾರರಾಗಿ ವಿನೋದ್, ವ್ಯವಸ್ಥಾಪಕಿಯಾಗಿ ಕುಡೆಕಲ್ ಸವಿತಾ ಕಾರ್ಯನಿರ್ವಹಿಸಿದರು.
ಸಮಾರೋಪದಲ್ಲಿ ಅಸ್ಸಾಂ ಮುಖ್ಯಮಂತ್ರಿ ಶುಬ್ರನನ್ ಶೋಭಾನಾಲ್, ಹಾಕಿ ಇಂಡಿಯಾ ವೀಕ್ಷಕ ರಂಜಿತ್ ಮಿಶ್ರ, ಪಂದ್ಯಾವಳಿ ವೀಕ್ಷಕ ಕುಲ್ದೀಪ್, ಹಾಕಿ ಅಸ್ಸಾಂ ಕಾರ್ಯದರ್ಶಿ ತಬನ್‍ದಾಸ್ ಬಹುಮಾನ ವಿತರಣೆ ಮಾಡಿದರು.
ಕ್ಯಾಂಪ್‍ಗೆ ಆಯ್ಕೆ : ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಾರಣ ಹಾಕಿ ಇಂಡಿಯಾ ಕೂರ್ಗ್ ತಂಡದಿಂದ ಆರು ಆಟಗಾರರನ್ನು ಸಬ್ ಜೂನಿಯರ್ ಇಂಡಿಯನ್ ಕ್ಯಾಂಪ್‍ಗೆ ಆಯ್ಕೆ ಮಾಡಿಕೊಂಡಿದೆ. ಅಪ್ಸರ, ಪಾರ್ವತಿ, ನೇತ್ರಾವತಿ (ಗೋಲ್ ಕೀಪರ್), ಶಿಲ್ಪ, ಜಿ. ಕಾವ್ಯಾ, ಪ್ರಗತಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
-ವರದಿ : ಸುದ್ದಿಪುತ್ರ