ಗೋಣಿಕೊಪ್ಪಲು, ಫೆ. 7: ಗೋಣಿಕೊಪ್ಪಲುವಿನ ಚಿನ್ನ, ಬೆಳ್ಳಿ ವರ್ತಕರ ಕೆಲಸಗಾರರ ಸಂಘದ 10ನೇ ವರ್ಷದ ವಾರ್ಷಿಕ ಮಹಾಸಭೆ ಸ್ವರ್ಣ ಭವನದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಚಿನ್ನ, ಬೆಳ್ಳಿ ವರ್ತಕರ ಕೆಲಸಗಾರರ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಸಂಘದೊಂದಿಗೆ ಸ್ನೇಹ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಬೇಕು. ಸಂಘ ಸ್ಥಾಪನೆಯಿಂದ ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವ ಅವಕಾಶ ಲಭ್ಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಸಂಘದ ತಾಲೂಕು ಅಧ್ಯಕ್ಷ ಕೆ.ಪಿ. ಪ್ರಶಾಂತ್ ಮಾತನಾಡಿ, ವಾರ್ಷಿಕವಾಗಿ ಸಂಘವು ಲಾಭದತ್ತ ಸಾಗುತ್ತಿದೆ. ಈ ಬಾರಿ ಕ್ರೀಡೆಗೆ ಒತ್ತು ನೀಡಲಾಗಿದೆ ಎಂದರು. ದೈವಜ್ಞ ಬ್ರಾಹ್ಮಣರ ಸಂಘದ ತಾಲೂಕು ಅಧ್ಯಕ್ಷ ಎಂ.ಜಿ. ಕಾಂತರಾಜ್ ಮಾತನಾಡಿ, ಒಗ್ಗಟ್ಟು ಬಲವಿದ್ದಲ್ಲಿ ಸಂಘ ಮುಂದುವರೆಯಲಿದೆ. ಸಂಘದ ಅಭಿವೃದ್ಧಿ ಕೆಲಸಗಳಿಗೆ ಹಿರಿಯರು ಮಾರ್ಗದರ್ಶನ ನೀಡುತ್ತಿರುವದು ಶ್ಲಾಘನೀಯ. ಮುಂದೆ ಕೆಲಸಗಾರರಿಗೆ ನೂತನ ಸದಸ್ಯತ್ವ ನೀಡುವಂತಾಗಬೇಕು ಎಂದರು. ಸಂಘದ ಗೌರವ ಅಧ್ಯಕ್ಷ ಎಂ.ಜಿ. ಮೋಹನ್ ಪ್ರಾಸ್ತವಿಕವಾಗಿ ಮಾತನಾಡಿ, ಇಂದು ಸಂಘವು ತನ್ನ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿದೆ, ಮುಂದೆ ಕಟ್ಟಡ ಅಭಿವೃದ್ಧಿ ಪಡಿಸಲು ಎಲ್ಲರು ಸಹಕರಿಸುವಂತೆ ಕೋರಿದರು.
ಗೋಣಿಕೊಪ್ಪ ಚಿನ್ನ, ಬೆಳ್ಳಿ ವರ್ತಕರ ಕೆಲಸಗಾರರ ಸಂಘದ ಅಧ್ಯಕ್ಷ ಹೆಚ್. ಗಜಾನನ ಶೇಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ಅವಧಿಯಲ್ಲಿ ಸಂಘದ ವತಿಯಿಂದ ಸಂಸಾರ ಸಹಿತ ಪ್ರವಾಸ ಹಮ್ಮಿಕೊಳ್ಳಲಾಗುವದು ಪ್ರತಿ ಅಂಗಡಿ ಮಾಲೀಕರು ತಮ್ಮ ಅಂಗಡಿಗೆ ಮುಂಜಾಗ್ರತೆ ವಹಿಸಲು ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದರು.
ಸಂಘದ ಕಾರ್ಯದರ್ಶಿ ವಿ.ವಿ. ಜಿತೇಂದ್ರ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಸಂಘದ ವತಿಯಿಂದ ಶಟಲ್ ಬ್ಯಾಡ್ಮಿಂಟನ್, ಮಹಿಳೆಯರಿಗೆ ಸಂಗೀತಾ, ಕೆರಂಬೋರ್ಡ್, ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎಂ.ಜಿ. ನಾರಾಯಣ್ ಸಹ ಕಾರ್ಯದರ್ಶಿ ಹೆಚ್.ಜಿ. ನಾಗರಾಜ್, ಸಮಿತಿಯ ನಿರ್ದೇಶಕ ಎ. ಗೋಪಾಲ್, ರವಿಶಾನು, ಬಿ.ಎಂ. ಶ್ರೀಧರ, ಎಸ್. ಶಿವು, ಪ್ರಕಾಶ್, ಹೆಚ್.ಟಿ. ಉಮೇಶ್ ಭಾಗವಹಿಸಿದ್ದರು. ನಾಗರಾಜ್ ಸ್ವಾಗತಿಸಿದರು. ವಿವೇಕ್ ಕಾರ್ಯಕ್ರಮ ನಿರೂಪಿಸಿದರು. ವಿಜೇತರಿಗೆ ಬಹುಮಾನಗಳನ್ನು ಸಂಘದ ಪ್ರಮುಖರು ವಿತರಿಸಿದರು.