ಮಡಿಕೇರಿ, ಫೆ. 7: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ರೈತರು ಕಾಡಾನೆಗಳ ಧಾಳಿಗೆ ತುತ್ತಾಗಿ ಮರಣ ಅಪ್ಪಿದ್ದಾರೆ. ಈಗಾಗಲೇ ಕಾಡಾನೆಗಳ ಧಾಳಿಯನ್ನು ತಪ್ಪಿಸಲು ರೈಲ್ವೆ ಕಂಬಿಗಳನ್ನು ಅಳವಡಿಸಿ ಬೇಲಿ ನಿರ್ಮಿಸಲು ರೂ.14 ಕೋಟಿ ಮಂಜೂರಾಗಿದ್ದು, ಇಲಾಖೆಗೆ ಮುಂಗಡವಾಗಿ ರೂ.5 ಕೋಟಿ ನೀಡಬೇಕಾಗುತ್ತದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಸರಕಾರದ ಗಮನ ಸೆಳೆದಿದ್ದಾರೆ.
ಆದರೆ ಆರ್ಥಿಕ ಇಲಾಖೆಯು ಒಪ್ಪಿಗೆ ಸೂಚಸಿರುವದಿಲ್ಲ ಇದರಿಂದಾಗಿ ರೈಲ್ವೆ ಕಂಬಿಗಳ ಬೇಲಿ ನಿರ್ಮಾಣಕ್ಕೆ ಚಾಲನೆ ದೊರಕಿರು ವದಿಲ್ಲ. ಆದ್ದರಿಂದ ಕೂಡಲೇ ಆರ್ಥಿಕ ಇಲಾಖೆ ಅರಣ್ಯ ಇಲಾಖೆ ಮುಖ್ಯಸ್ಥರ ಸಭೆ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸುವಂತೆ ಅವರು ಸದನದಲ್ಲಿ ಅರಣ್ಯ ಸಚಿವರ ಗಮನ ಸೆಳೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ಬಿ. ರಮಾನಾಥ ರೈ 2017-18ನೇ ಸಾಲಿನಲ್ಲಿ ರೈಲ್ವೆ ಕಂಬಿಗಳನ್ನು ಬಳಸಿ ಬೇಲಿ ನಿರ್ಮಿಸುವ ಕಾಮಗಾರಿಯ ಕುರಿತು ಮೇಲಿಂದ ಮೇಲೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ರೈಲ್ವೆ ಇಲಾಖೆಗೆ ರೈಲ್ವೆ ಕಂಬಿಗಳ ಸರಬರಾಜಿಗೆ ಮುಂಗಡ ಹಣವನ್ನು ಪಾವತಿಸುವ ಬಗ್ಗೆ ಇರುವ ಅಡಚಣೆಗಳನ್ನು ಗಮನಿಸಲಾಗಿದೆ.
ಆರ್ಥಿಕ ಇಲಾಖೆಯು ರೈಲ್ವೇ ಇಲಾಖೆಗೆ ಮುಂಗಡ ಹಣವನ್ನು ಸೆಳೆದು ನೀಡಬಹುದೆಂದು ಅರಣ್ಯ ಇಲಾಖೆಗೆ ತಿಳಿಸಿತ್ತು. ರೈಲ್ವೆ ಕಂಬಿಗಳ ಖರೀದಿಗೆ ಬೇಕಾಗುವ ಬೃಹತ್ ಮೊತ್ತದ ಬಗ್ಗೆ ಆರ್ಥಿಕ ಇಲಾಖೆಯ ಗಮನ ಸೆಳೆಯಲಾಗಿ ಅವರು, ಕಾಡಾನೆಗಳ ಧಾಳಿಯಿಂದ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಕೈಗೊಳ್ಳುವ ಕಾಮಗಾರಿಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ್ದಾಗಿ ವಿವರಿಸಿದ್ದಾರೆ.
ರಾಜ್ಯದಲ್ಲಿ ಆನೆಗಳ ಸಂಖ್ಯೆ ಅಧಿಕವಾಗಿರುವ ಪ್ರದೇಶಗಳಲ್ಲಿ ರೈಲ್ವೆ ಕಂಬಿಗಳ ತಡೆ ನಿರ್ಮಿಸುವ ಸಲುವಾಗಿ ರೈಲು ಪರಿಕರಗಳನ್ನು ರೈಲ್ವೆ ಇಲಾಖೆಯಿಂದ ಖರೀದಿಸಲು ಆಯಾ ವಿಭಾಗಗಳ ಅವಶ್ಯಕತೆಗನುಸಾರವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ. ನಾಗರಹೊಳೆ ಇವರಿಗೆ ರೂ.7 ಕೋಟಿ ಆರ್ಥಿಕ ಮಿತಿಯೊಳಗೆ ಹಾಗೂ ಇನ್ನಿತರ ಬಂಡೀಪುರ, ಬನ್ನೇರುಘಟ್ಟ, ಮಡಿಕೇರಿ ಮತ್ತು ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ರೂ. 2 ಕೋಟಿ ಆರ್ಥಿಕ ಮಿತಿಯೊಳಗೆ ಸೆಳೆಯಲು ಷರತ್ತಿನೊಂದಿಗೆ ಅನುಮೋದನೆ ನೀಡಲಾಗಿದೆ. ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಂಬಂಧಿಸಿ ದವರಿಗೆ ಸೂಚಿಸಲಾಗು ವದು ಎಂದು ಸಚಿವರು ಬೋಪಯ್ಯ ಅವರ ಪ್ರಶ್ನೆಗೆ ಮಾಹಿತಿ ನೀಡಿದ್ದಾರೆ.