ಸೋಮವಾರಪೇಟೆ, ಫೆ. 7: ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಪಟ್ಟಣ ಪಂಚಾಯಿತಿ ಆಡಳಿತ ಅಡ್ಡಗಾಲು ಹಾಕುತ್ತಿದ್ದು, ಒಂದು ವಾರದೊಳಗೆ ಕ್ಯಾಂಟಿನ್‍ಗೆ ಸೂಕ್ತ ಜಾಗವನ್ನು ಕಲ್ಪಿಸದಿದ್ದಲ್ಲಿ ಪಂಚಾಯಿತಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಇಂದಿರಾಗಾಂಧಿ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಎಚ್.ಎ.ನಾಗರಾಜ್ ಎಚ್ಚರಿಸಿದ್ದಾರೆ.

ಸಂಘಟನೆಯ ಮನವಿ ಮೇರೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ವಿಶೇಷ ಆಸಕ್ತಿ ವಹಿಸಿ ಪಟ್ಟಣಕ್ಕೆ ಇಂದಿರಾ ಕ್ಯಾಂಟಿನ್ ತೆರೆಯಲು ಅನುಮತಿ ನೀಡಿದ್ದಾರೆ. ಪಂಚಾಯಿತಿ ಜನವರಿ ತಿಂಗಳ ಒಳಗೆ ಟೆಂಡರ್ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕಿತ್ತು. ಆದರೆ ರಾಜಕೀಯ ದುರುದ್ದೇಶದಿಂದ ಇಂದಿರಾ ಕ್ಯಾಂಟೀನ್‍ಗೆ ಸೂಕ್ತ ಜಾಗ ಕಲ್ಪಿಸದೆ, ಜನರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಪಂಚಾಯಿತಿ ಆಡಳಿತದಿಂದ ಇಂತಹ ಅನ್ಯಾಯ ನಡೆಯುತ್ತಿದ್ದರೂ, ಕಾಂಗ್ರೆಸ್ ಸದಸ್ಯರು ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಪಕ್ಷದ ಮುಖಂಡರು ದನಿಯೆತ್ತಬೇಕೆಂದು ನಾಗರಾಜ್ ಆಗ್ರಹಿಸಿದ್ದಾರೆ.