ಮಡಿಕೇರಿ, ಫೆ. 7: ರಾಜ್ಯದ ಹಾಕಿ ಆಟಗಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಬೆಂಗಳೂರಿನ ಅಕ್ಕಿ ತಿಮ್ಮನಹಳ್ಳಿ, ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣ ಹಾಗೂ ಪೊನ್ನಂಪೇಟೆಗಳಲ್ಲಿ ಅತ್ಯಾಧುನಿಕ ಅಂತರ್ರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್ ಹಾಕಿ ಟರ್ಫ್ ಅಳವಡಿಸಲಾಗಿದೆ ಎಂದು ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.ವಿಧಾನ ಮಂಡಲ ಅಧಿವೇಶನದ ಸಂದರ್ಭ ವಿಧಾನ ಪರಿಷತ್‍ನಲ್ಲಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ರಾಜ್ಯದಲ್ಲಿನ ಹಾಕಿ ಆಟಗಾರರಿಗೆ ಅಂತರ್ರಾಷ್ಟ್ರೀಯ ಮಟ್ಟದ ತರಬೇತಿ, ಸೌಲಭ್ಯ ಹಾಗೂ ವೃತ್ತಿ ಪರತೆ ಸಿಗುವಂತಾಗಲು ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳೇನು ಎಂದು ಪ್ರಶ್ನಿಸಿದಾಗ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಕೂಡಿಗೆಗಳಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಕ್ರೀಡಾಪಟುಗಳ ಬಳಕೆಗೆ ಒದಗಿಸಲಾಗುವದು. ರಾಜ್ಯದ ಬೆಂಗಳೂರು, ಮೈಸೂರು, ಹಾವೇರಿ, ಮಡಿಕೇರಿ, ರಾಯಚೂರು, ಹಾಸನ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಧಾರವಾಡ, ಕಲ್ಬುರ್ಗಿ, ಬಳ್ಳಾರಿ, ಪೊನ್ನಂಪೇಟೆ, ಗದಗ ಹಾಗೂ ಕೂಡಿಗೆ ಕ್ರೀಡಾ ವಸತಿ ನಿಲಯಗಳಲ್ಲಿ ಹಾಕಿ ಕ್ರೀಡಾ ವಿಭಾಗಗಳನ್ನು ಆರಂಭಿಸಲಾಗಿದ್ದು, ಹಾಕಿ ಉಚಿತ ಊಟೋಪಚಾರ, ವಸತಿ ಮತ್ತಿತರ ಸೌಲಭ್ಯ ಒದಗಿಸಲಾಗುತ್ತಿದೆ. ಸಾಧಕ ಹಾಕಿ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ಸಾಧನೆಗಾಗಿ ನಗದು ಪುರಸ್ಕಾರ ನೀಡಲಾಗುತ್ತಿದ್ದು, ರಾಜ್ಯ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ‘ಏಕಲವ್ಯ’ ಪ್ರಶಸ್ತಿಗೂ ಪರಿಗಣಿಸಲಾಗುತ್ತಿದೆ ಎಂದು ಉತ್ತರಿಸಿದ್ದಾರೆ.

(ಮೊದಲ ಪುಟದಿಂದ) ಕೊಡಗು ಜಿಲ್ಲೆಯಲ್ಲಿ ಪ್ರತಿಭಾವಂತ ಹಾಕಿ ಕ್ರೀಡಾಪಟುಗಳಿಗೆ ಜಾಗತಿಕ ಗುಣಮಟ್ಟದ ಹಾಕಿ ಕ್ರೀಡಾ ಮೂಲಸೌಕರ್ಯಗಳನ್ನು ಒದಗಿಸುವ ಅಂಗವಾಗಿ ಪೊನ್ನಂಪೇಟೆ, ಕೂಡಿಗೆ ಮತ್ತು ಸೋಮವಾರಪೇಟೆಯಲ್ಲಿ ಆಧುನಿಕ ಹಾಕಿ ಟರ್ಫ್‍ಗಳನ್ನು ಅಳವಡಿಸಲು ಕ್ರಮ ವಹಿಸಲಾಗಿದೆ. ಹಾಕಿ ಕ್ರೀಡಾ ತರಬೇತಿಗಾಗಿ ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ, ಪೊನ್ನಂಪೇಟೆ ಮತ್ತು ಮಡಿಕೇರಿಯಲ್ಲಿ ಕ್ರೀಡಾ ಶಾಲೆ, ವಸತಿ ನಿಲಯಗಳನ್ನು ಆರಂಭಿಸಿ ಹಾಕಿ ಕ್ರೀಡೆಯಲ್ಲಿ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ. ಕ್ರೀಡಾಕೂಟಗಳ ಆಯೋಜನೆಗೆ ಅನುದಾನ ಹಾಗೂ ಪ್ರತಿಭಾವಂತ ಕ್ರೀಡಾಪುಟಗಳಿಗೆ ನಗದು ಪುರಸ್ಕಾರ ನೀಡಲಾಗುತ್ತಿದೆ ಎಂದು ಉತ್ತರಿಸಿದ್ದಾರೆ.