ವೀರಾಜಪೇಟೆ, ಫೆ. 7: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಚರಿಸಿ ಪಕ್ಷದ ಸಾಧನೆಗಳನ್ನು ಮತದಾರರಿಗೆ ಪರಿಚಯಿಸಿ ಮತದಾರರನ್ನು ಓಲೈಸಬೇಕು. ಪಕ್ಷದ ಸಾಧನೆಗಳ ಸೌಲಭ್ಯಗಳು ಮತದಾರರಿಗೆ ಲಭಿಸುತ್ತಿದೆಯೇ ಎನ್ನುವದನ್ನು ಅರಿಯಬೇಕು. ಇದಕ್ಕಾಗಿ ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯನ್ನು ಪ್ರತ್ಯೇಕಿಸಿ ಅವರನ್ನು ನೇರವಾಗಿ ಭೇಟಿ ಮಾಡುವಂತಾಗಬೇಕೆಂದು ಅಖಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ಚುನಾವಣೆಯ ಕೊಡಗು ಉಸ್ತುವಾರಿ ಪಿ.ಸಿ.ವಿಷ್ಣುನಾಥನ್ ಹೇಳಿದರು.ಕ್ಷೇತ್ರದ ಮೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಕಾವೇರಿ ಕಲ್ಯಾಣ ಮಂಟಪದಲ್ಲಿ ಇಂದು ಹಮ್ಮಿಕೊಂಡಿದ್ದ ವಿಶೇಷ ಕಾರ್ಯಗಾರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಷ್ಣುನಾಥನ್ ಅವರು ರಾಜ್ಯದ ಸಿದ್ದರಾಮಯ್ಯ ಅವರ ಸರಕಾರ ಚುನಾವಣೆಯ ಸಮಯದಲ್ಲಿ ನೀಡಿದ್ದ 165 ಪ್ರಣಾಳಿಕೆಯ ಪೈಕಿ 159ನ್ನು ಈಡೇರಿಸಿದೆ. ರಾಜ್ಯ ಸರಕಾರ ಇಂದಿರಾ ಕ್ಯಾಂಟೀನ್ ಆಯ್ದ ಕಡೆಗಳಲ್ಲಿ ಆರಂಭಿಸಿ ತೆರಿಗೆ ರಹಿತವಾಗಿ

(ಮೊದಲ ಪುಟದಿಂದ) ರೂ. 5ಕ್ಕೆ ತಿಂಡಿ 10 ರೂ. ಗೆ ಊಟ ಕೊಡಲಾಗುತ್ತಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು ರೈತ ವರ್ಗ ಎಲ್ಲರಿಗೂ ಅನುಕೂಲವಾಗಿದೆ ಎಂದರು.

ಕೆ.ಪಿ.ಸಿ.ಸಿ ಸದಸ್ಯ ವೆಂಕಟಗೌಡ ಮಾತನಾಡಿ ಕೇಂದ್ರ ಸರಕಾರ ನೀಡಿದ ಭರವಸೆ ಶೂನ್ಯ. ಜಿ.ಎಸ್.ಟಿ.ಯನ್ನು ಜಾರಿಗೆ ತಂದು ವ್ಯಾಪಾರಿಗಳು, ಸಾಮಾನ್ಯ ಜನತೆಯ ತಲೆಯ ಮೇಲೆ ಹೊರೆ ಹಾಕಿದ್ದಾರೆ. ಕಳೆದ 2014ಕ್ಕೂ ಈಗಕ್ಕೂ ಸಾಮಾಗ್ರಿಗಳ ಬೆಲೆಯನ್ನು ಹೋಲಿಸಿದರೆ ಶೇಕಡ 40ರಷ್ಟು ಅಧಿಕವಾಗಿದೆ ಎಂದು ದೂರಿದರು.

ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದನ್ನು ನೋಡಿದರೆ ಸಿದ್ದರಾಮಯ್ಯ ಅವರ ಸರಕಾರವನ್ನು ಟೀಕಿಸುವದಕ್ಕಾಗಿ ಬಂದು ಚುನಾವಣಾ ಪ್ರಚಾರ ಮಾಡಿ ತೆರಳಿದ್ದಾರೆ. ಮೋದಿ ಅವರು ಕೇವಲ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಪ್ರಧಾನಿಯಾಗದೆ ಭಾರತದ ಸರ್ವರಿಗೂ ಪ್ರಧಾನ ಮಂತ್ರಿ ಎಂಬದನ್ನು ಮರೆತಿದ್ದರೆಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ ಕೇಂದ್ರ ಸರಕಾರದ ಆಮದು ನೀತಿಯಿಂದ ಕಾಫಿ ಹಾಗೂ ಕರಿಮೆಣಸಿಗೆ ಶೇಕಡ 40ರಷ್ಟು ಬೆಲೆ ಕುಸಿಯುವಂತಾಗಿದೆ. ಇದರಿಂದ ಕೊಡಗಿನ ಬೆಳೆಗಾರರು, ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈಗ ಜನತೆಗೆ ಕಾಂಗ್ರೆಸ್ ಪಕ್ಷದ ಸಾಧನೆ ಅರಿವಾಗಿದೆ ಎಂದರು. ಸಭೆಯನ್ನುದ್ದೇಶಿಸಿ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ ಮಾತನಾಡಿದರು. ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿದರು. ಕೆ.ಪಿ.ಸಿ.ಸಿ. ಸದಸ್ಯ ಪ್ರದೀಪ್ ಕಾರ್ಯಕರ್ತರಿಗೆ ತರಬೇತಿ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸರಿತಾ ಪೂಣಚ್ಚ, ವಿ.ಕೆ.ಸತೀಶ್, ಚಂಗಪ್ಪ, ಅಲ್ಪ ಸಂಖ್ಯಾತರ ಘಟಕದ ರಾಜ್ಯ ಸಮಿತಿಯ ಪಿ.ಸಿ. ಹಸೈನಾರ್ ಹಾಜಿ, ಕೆ.ಪಿ.ಸಿಸಿ. ಕಾರ್ಯದರ್ಶಿ ಮಿಟ್ಟು ಚಂಗಪ್ಪ, ಸದಸ್ಯ ಶುಭೋಧಾಯಿನಿ, ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರೆಹಮಾನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ಬಿ.ಎಸ್. ರಮಾನಾಥ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಉಪಸ್ಥಿತರಿದ್ದರು. ಧರ್ಮಜ ಉತ್ತಪ್ಪ ಸ್ವಾಗತಿಸಿ, ಅಬ್ದುಲ್ ಸಲಾಂ ವಂದಿಸಿದರು.