ಮಡಿಕೇರಿ, ಫೆ. 7: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಮುಖಾಂತರ ಕೇರಳಕ್ಕೆ ಹಾದುಹೋಗುವಂತಹ ಯಾವದೇ ರೈಲ್ವೇ ಯೋಜನೆಗೆ ಈ ತನಕ ಕರ್ನಾಟಕ ಸರಕಾರದಿಂದ ಒಪ್ಪಿಗೆ ನೀಡಿರುವದಿಲ್ಲವೆಂದು; ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.ಸದನದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಈ ಬಗ್ಗೆ ಪ್ರಸ್ತಾಪಿಸಿ, ಕೇರಳ ರಾಜ್ಯದ ಕಲ್ಲಿಕೋಟೆಯಿಂದ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಮುಖಾಂತರ ಹಾದು ಹೋಗುವ; ಕೇರಳ ಸರಕಾರದ ಯೋಜನೆಗೆ ಪೂರ್ವಭಾವಿ ಸಮೀಕ್ಷೆ (ಡಿ.ಪಿ.ಆರ್.) ನಡೆಸಲು ಕರ್ನಾಟಕ ಸರಕಾರ ಒಪ್ಪಿಗೆ ಸೂಚಿಸಿದೆಯೇ? ಎಂದು ಪ್ರಶ್ನಿಸಿದ್ದರು.

ಶಾಸಕರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿರುವ ಸಚಿವರು, ಈ ಯೋಜನೆಯ ಪೂರ್ವಭಾವಿ ಸಮೀಕ್ಷೆಗೆ ಸಂಬಂಧಿಸಿದಂತೆ ಕೇರಳ ರಾಜ್ಯ ಸರಕಾರದಿಂದ ಸ್ಪಷ್ಟ ಪ್ರಸ್ತಾವನೆಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರಸ್ತಾವನೆ ಸ್ವೀಕೃತಗೊಂಡ ಬಳಿಕ ಅದನ್ನು ಪರಿಶೀಲಿಸಿ ಮುಂದೆ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇದು ಯಾವ ಹಂತದಲ್ಲಿದೆ ಮತ್ತು ಈ ಯೋಜನೆಗೆ ಸ್ಥಳೀಯರ ವಿರೋಧ ಇರುವದು ಸರಕಾರದ ಗಮನಕ್ಕೆ ಬಂದಿದೆಯೇ? ಹಾಗಿದ್ದರೆ ಸರಕಾರದ ನಿಲುವೇನು? ಎಂಬ ಬೋಪಯ್ಯ ಅವರ ಮರು ಪ್ರಶ್ನೆಗೆ ಉತ್ತರಿಸಿರುವ ಸಚಿವ ದೇಶಪಾಂಡೆ, ಎಲ್ಲವೂ ಸರಕಾರದ ಗಮನಕ್ಕೆ ಬಂದಿರುವದಾಗಿ ಪ್ರತಿಕ್ರಿಯಿಸಿದ್ದಾರೆ.

ಈ ರೈಲ್ವೇ ಯೋಜನೆಯ ಅನುಷ್ಠಾನದ ಬಗ್ಗೆ ಸ್ಥಳೀಯರ ಭಾವನೆ, ಯೋಜನೆ ಅನುಷ್ಠಾನದಿಂದ ವನ್ಯಜೀವಿ ಹಾಗೂ ಪರಿಸರದ ಮೇಲಾಗುವ ಪರಿಣಾಮ, ರಾಜ್ಯ ಸರಕಾರದ ಮೇಲಾಗುವ ಆರ್ಥಿಕ ಪರಿಣಾಮ ಇತ್ಯಾದಿ ಪ್ರಮುಖ ಅಂಶಗಳನ್ನು ಪರಿಗಣಿಸಿ, ಆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ. ಇನ್ನು ಮೈಸೂರು - ಕುಶಾಲನಗರದವರೆಗಿನ ರೈಲ್ವೇ ಸಂಪರ್ಕ ಕಲ್ಪಿಸುವ ಯೋಜನೆಯ ಸರ್ವೆ ಕಾರ್ಯ ಮುಗಿದಿದ್ದು, ರಾಜ್ಯದಿಂದ ಕೇಂದ್ರಕ್ಕೆ ವರದಿಯನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಶಾಸಕರ ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.

110 ಕಿ.ಮೀ. ಯೋಜನೆ

ಕೇಂದ್ರ ರೈಲ್ವೇ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ, ಮೈಸೂರಿನಿಂದ ಮಡಿಕೇರಿ ನಡುವೆ ರೈಲ್ವೇ ಯೋಜನೆ ರೂಪಿಸಲು ರಾಜ್ಯ ಸರಕಾರದಿಂದ 110 ಕಿ.ಮೀ. ಅಂತರದಲ್ಲಿ ಮಂಜೂರಾತಿ ನೀಡಲಾಗುತ್ತದೆ ಎಂದು ಸಚಿವ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.

ಸದನದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು; ‘ಕೊಡಗು ಜಿಲ್ಲೆಯಲ್ಲಿ ಯಾವ್ಯಾವ ರೈಲ್ವೇ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ?' ಎಂದು ಪ್ರಶ್ನಿಸಲಾಗಿ ಸಚಿವರು ಉತ್ತರ ನೀಡಿದ್ದಾರೆ. ಆ ಪ್ರಕಾರ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ- ಮೈಸೂರು ನಡುವೆ 120 ಕಿ.ಮೀ. ದೂರವಿದ್ದು, ಬಹುಶಃ ಮೈಸೂರಿನಿಂದ ನಿರ್ದಿಷ್ಟವಾಗಿ ಎಲ್ಲಿಯತನಕ ಯೋಜನೆ ಎಂದು ಉಲ್ಲೇಖಿಸಿಲ್ಲ; ಬದಲಾಗಿ ಮೈಸೂರು- ಕುಶಾಲನಗರ ತನಕ ಕೇವಲ 185 ಕಿ.ಮೀ. ಅಂತರವಿದೆ. ಹೀಗಾಗಿ ಪ್ರಸಕ್ತ ರೈಲ್ವೇ ಯೋಜನೆ ನಿರ್ದಿಷ್ಟವಾಗಿ ಎಲ್ಲಿಯ ತನಕ ಎಂಬ ಅನುಮಾನ ಹುಟ್ಟಿಕೊಳ್ಳಲಿದೆ.