ಹೆಬ್ಬಾಲೆ. ಫೆ.7 : ಸಮೀಪದ ತೊರೆನೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಎಂಬ ಗ್ರಾಮದಲ್ಲಿ ಚಿರತೆಯೊಂದು ಮೇಕೆಯನ್ನು ತಿಂದು ಪರಾರಿಯಾಗಿರುವ ಘಟನೆ ನಡೆದಿದೆ.
ಚಿಕ್ಕನಾಯಕನ ಹೊಸಳ್ಳಿ ಗ್ರಾಮದ ನಿವಾಸಿ ಲಕ್ಷ್ಮೀಶ ಎಂಬವರಿಗೆ ಸೇರಿದ ಮೇಕೆ ಚಿರತೆ ಧಾಳಿಗೆ ಸಿಲುಕಿ ಮೃತಪಟ್ಟಿದೆ.
ಮಂಗಳವಾರ ಮಧ್ಯರಾತ್ರಿ ಮೇಕೆಯ ಕೊಟ್ಟಿಗೆಗೆ ನುಗ್ಗಿದ ಈ ಚಿರತೆ ಯಾವದೇ ಶಬ್ಧ ಬಾರದ ರೀತಿಯಲ್ಲಿ ತಿಂದು ಹೋಗಿದೆ. ಈ ವಿಚಾರ ತಿಳಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಚಿಕ್ಕನಾಯಕನ ಹೊಸಳ್ಳಿ ಕೊಡಗು ಮತ್ತು ಹಾಸನ ಜಿಲ್ಲೆಗಳ ಗಡಿ ಗ್ರಾಮವಾಗಿದ್ದು, ಯಾವ ಅರಣ್ಯ ಪ್ರದೇಶದಿಂದ ಚಿರತೆ ಬಂದಿದೆ ಎಂಬ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ. ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಮಾರ್ಗದರ್ಶನದಲ್ಲಿ ಕಣಿವೆ ಉಪವಲಯ ಅರಣ್ಯಾಧಿಕಾರಿ ಎಸ್.ಬಿ. ಸತೀಶ್‍ಕುಮಾರ್, ಸಿಬ್ಬಂದಿಗಳಾದ ದೇವೇಂದ್ರ, ಗಣೇಶ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.