ಚಿತ್ರ ವರದಿ : ಎನ್.ಎನ್. ದಿನೇಶ್
*ಗೋಣಿಕೊಪ್ಪಲು, ಫೆ. 7 : ಬಾಣಂತಿ ಹಾಗೂ ಮಗುವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ‘ನಗು ಮಗು’ ವಾಹನಕ್ಕೆ ವಿಮೆಯ ಗ್ರಹಣ ಹಿಡಿದು ನಿಂತಿದೆ. ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 5 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ನಗು ಮಗು ವಾಹನ ಕಳೆದ 2 ತಿಂಗಳುಗಳಿಂದ ನಿಷ್ಕ್ರಿಯಗೊಂಡು ಆರೋಗ್ಯ ಕೇಂದ್ರದ ವಾಹನ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದೆ.
ವಾಹನದ ವಿಮೆ ಪಾವತಿಸದೆ ಇರುವದು ‘ನಗು ಮಗು’ ಸೇವೆಯ ವಾಹನ ನಿಲ್ಲಲು ಕಾರಣವಾಗಿದ್ದರೂ ವಾಹ&divound;ದÀ 4 ಚಕ್ರಗಳು ಮತ್ತು ಇಂಜಿನ್ ಆಯಿಲ್ ಬದಲಾಯಿಸಲೂ ಸರ್ಕಾರದಿಂದ ಅನುದಾನ ಬಾರದೇ ಇರುವದು ಸಹ ಮುಖ್ಯ ಕಾರಣವಾಗಿದೆ.
ಟಯರ್ ಬದಲಾಯಿಸಲು 4 ಕ್ಕೆ 21,600 ರೂಪಾಯಿ ಬೆಲೆ ತೆರಬೇಕು. ಈ ಹಣವನ್ನು ಭರಿಸಲು ಸಂಬಂಧಪಟ್ಟವರು ನಿರ್ಲಕ್ಷ್ಯ ತೋರಿದ್ದರಿಂದ ವಾಹನ ಸಂಚಾರ ಸ್ಥಗಿತಗೊಳ್ಳಲು ಕಾರಣವಾಗಿದೆ. ಅಲ್ಲದೆ ವಾಹನ ಇಂಜಿನ್ ಆಯಿಲ್ ಮತ್ತು ವಿಮೆ 5 ಸಾವಿರ ರೂಪಾಯಿಯಷ್ಟು ಹಣವನ್ನು ಪಾವತಿಸಲು ಸಹ ಸಾಧ್ಯವಾಗದೇ ಇರುವದು ಚಾಲಕನ ತಿಂಗಳ ವೇತನವಿಲ್ಲದೆ ವಾಹನ ಸಾರ್ವಜನಿಕ ಸೇವೆ ಲಭ್ಯವಾಗದೇ ನಿಂತಿದೆ.
ವರ್ಷದಲ್ಲಿ ಸುಮಾರು 500ಕ್ಕೂ ಹೆಚ್ಚು ಬಾಣಂತಿ ಹಾಗೂ ಶಿಶುವನ್ನು ಸುರಕ್ಷಿತವಾಗಿ ಮನೆ ತಲುಪಿಸುತ್ತಿದ್ದ ವಾಹನ ಇದೀಗ ಸೇವೆಗೆ ಲಭ್ಯವಾಗುತ್ತಿಲ್ಲ. ಇದರಿಂದ ಬಹುತೇಕ ಬಡ ವರ್ಗದವರಿಗೆ ಸಮಸ್ಯೆಯಾಗಿ ಕಾಡುತ್ತಿದೆ.
2012ರಲ್ಲಿ ಬಾಣಂತಿ ಹಾಗೂ ಶಿಶುವನ್ನು ಸುರಕ್ಷಿತವಾಗಿ 48 ಗಂಟೆಯ ನಂತರ ಅವರ ಮನೆಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಹೆಚ್.ಎಂ.) ಅಡಿ ನೂತನ ಸೌಲಭ್ಯವನ್ನು ಪ್ರಾರಂಭಿಸಿತ್ತು. ಆರೋಗ್ಯ ಕೇಂದ್ರ ಆಡಳಿತ ಮಂಡಳಿ ಇದರ ನಿರ್ವಹಣೆಯಲ್ಲಿ ವಿಫಲತೆಯನ್ನು ಕಂಡುಕೊಂಡ ಕಾರಣ ಉತ್ತಮ ಸೌಲಭ್ಯವೊಂದು ಬಡವರಿಂದ ವಂಚಿತವಾಗಿ ದೂರ ಉಳಿಯುತ್ತಿದೆ.
ಹೇಳಿಕೆ
ಡಾ|| ಸುರೇಶ್, ಪ್ರಬಾರ ಆಡಳಿತ ಅಧಿಕಾರಿ ಸಮುದಾಯ ಆರೋಗ್ಯ ಕೇಂದ್ರ : ಸರ್ಕಾರ ‘ನಗು ಮಗು’ ವಾಹನವನ್ನು 108 ಅಂಬ್ಯೂಲೆನ್ಸ್ ವಾಹನದ ನಿರ್ವಹಣೆ ಸಂಸ್ಥೆಯೊಂದಿಗೆ ಮರ್ಜಿ ಮಾಡಲು ಚಿಂತನೆ ಹರಿಸಿದೆ. ಹೀಗಾಗಿ ‘ನಗು ಮಗು’ ವಾಹನದ ನಿರ್ವಹಣೆಗೆ ಬೇಕಾದ ಅನುದಾನ ದೊರಕುತ್ತಿಲ್ಲ. ವಿಮೆ ಪಾಲಿಸಿ ಕಂತನ್ನು ಸರ್ಕಾರವೇ ನೇರವಾಗಿ ವಿಮಾ ಸಂಸ್ಥೆಗೆ ಪಾವತಿಸುತ್ತದೆ. ಇದರಲ್ಲಿ ವಿಳಂಬವಾದ ಕಾರಣ ವಿಮೆ ಹಣ ಪಾವತಿಸಲು ಸಾಧ್ಯವಾಗಿಲ್ಲ. ವಾಹನದ ಚಕ್ರಗಳು ದುರಸ್ಥಿಯಲ್ಲಿದ್ದು, ಅನುದಾನ ಭಾರದೇ ಇರುವದರಿಂದ ಬದಲಾಯಿಸಲು ಸಾಧ್ಯವಾಗಿಲ್ಲ. ಆದರೂ ಹೊಂದಾಣಿಕೆಯಲ್ಲಿ ಚಕ್ರಗಳನ್ನು ಅಳವಡಿಸಲಾಗಿದೆ. ವಿಮೆ ಪಾವತಿಸಿದ ರಶೀದಿ ಬಂದ ನಂತರ ತಕ್ಷಣವೇ ಸೇವೆಗೆ ವಾಹನ ಲಭ್ಯವಿದೆ.
ಗಂಗೆ, ಸೌಲಭ್ಯ ವಂಚಿತ ಬಾಣಂತಿ ಮಹಿಳೆ : ‘ನಗು ಮಗು’ ವಾಹನ ಇಲ್ಲದೆ ಇರುವದರಿಂದ ನಮ್ಮ ಮನೆಗೆ ಆಟೋದಲ್ಲಿ ತೆರಳಬೇಕಾಯಿತು. ಈ ಸಂದರ್ಭ ಹೆಚ್ಚು ಮೈಕೈ ನೋವುಗಳು ಉಂಟಾದವು. ‘ನಗು ಮಗು’ ವಾಹನದಲ್ಲಿ ಯಾವದೇ ಸಮಸ್ಯೆಯಿಲ್ಲದೆ ಹೋಗಬಹುದು ಎಂದು ಮಾಹಿತಿ ಇದೆ. ಆದರೆ ಇಲ್ಲಿ ಈ ಸೌಲಭ್ಯ ಇಲ್ಲ.