ಮಡಿಕೇರಿ, ಫೆ. 7: ಕಾಫಿ ಬೆಳೆ ಹಾಗೂ ಬೆಳೆಗಾರರ ಸರ್ವತೋಮುಖ ಅಭಿವೃದ್ಧಿಗಾಗಿ ಕಾಫಿ ಮಂಡಳಿ ವತಿಯಿಂದ ಕೇಂದ್ರ ಸರ್ಕಾರಕ್ಕೆ ರೂ. 620 ಕೋಟಿ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ತಿಳಿಸಿದ್ದಾರೆ.

ಕಾಫಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 2 ದಿನಗಳ ಕಾಲ ವಿವಿಧ ವಿಭಾಗಗಳಲ್ಲಿ ಸಭೆ ನಡೆಸಲಾಯಿತು. ಕಾಫಿಯ ಅಭಿವೃದ್ಧಿ, ಸಂಶೋಧನೆ, ಪ್ರಚಾರ ಹಾಗೂ ಕಾಫಿಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ತಜ್ಞರೊಂದಿಗೆ ಸಭೆ ನಡೆಯಿತು. ಕಾಫಿ ಬೆಳೆಗಾರರ ಸೊಸೈಟಿ ಅಥವಾ ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ಕಾಫಿ ಖರೀದಿಗೆ ಮುಂದಾದಲ್ಲಿ ಕಾಫಿ ಮಂಡಳಿ ವತಿಯಿಂದ ಕೆ.ಜಿ. ಒಂದಕ್ಕೆ ರೂ. 4ರಂತೆ ಪ್ರೋತ್ಸಾಹಧನ ನೀಡುವದು, ನಿರುದ್ಯೋಗಿ ಯುವಕ- ಯುವತಿಯರಿಗೆ ಕಾಫಿ ಮಂಡಳಿಯಿಂದ ತರಬೇತಿ ನೀಡುವಂತೆ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಕಾಫಿ ಗುಣಮಟ್ಟ ಕಾಯ್ದುಕೊಳ್ಳುವ ದಕ್ಕಾಗಿ ಚಿಕೋರಿ ಬಳಸದೆ ಕಾಫಿ ತಯಾರಿಕೆಗೆ ಪ್ರೋತ್ಸಾಹ, ಇದಕ್ಕಾಗಿ ಕಾಫಿಯನ್ನು ಬ್ರಾಂಡ್ ಮಾಡುವ ಸಲುವಾಗಿ ಜಿಲ್ಲೆಯ ಪ್ರವಾಸಿ ತಾಣ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಕಾಫಿ ಕೆಫೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಇಲ್ಲಿ ಕೊಡಗು ತಯಾರು ಮಾಡಿ ಮಾರಾಟ ಮಾಡುವದಕ್ಕಾಗಿ ಕಾವೇರಿ ನಿಸರ್ಗಧಾಮ, ಕುಶಾಲನಗರ, ಅಬ್ಬಿಫಾಲ್ಸ್, ನಾಗರಹೊಳೆ, ಇರ್ಪು, ಗೋಣಿಕೊಪ್ಪಲು, ವೀರಾಜಪೇಟೆ, ತಲಕಾವೇರಿ, ಭಾಗಮಂಡಲ, ಮಡಿಕೇರಿ ಸೇರಿದಂತೆ ಹಲವು ಪ್ರದೇಶಗಳನ್ನು ಗುರುತಿಸಲಾಗಿದೆ.

ಚೆಟ್ಟಳ್ಳಿ ಹಾಗೂ ಬಾಳೆಹೊನ್ನೂರು ಪ್ರದೇಶದಲ್ಲಿ ಸುಮಾರು 600 ಎಕರೆ ಜಾಗ ಕಾಫಿ ಮಂಡಳಿ ಹೊಂದಿದ್ದು, ಇಲ್ಲಿ ಸಾವಯವ ಕಾಫಿ ಬೆಳೆಯಲು ಕ್ರಮ ಕೈಗೊಳ್ಳುವದು, ಮಣ್ಣು ಪರೀಕ್ಷೆಗೆ ಜಾಗೃತಿಗೆ ಅಭಿಯಾನ, ಕಾಫಿ ತೋಟಗಳ ಕಾರ್ಮಿಕ ಮಕ್ಕಳಿಗೆ ಪ್ರೋತ್ಸಾಹಧನ, ಕಾರ್ಮಿಕರಿಗೆ ಹಾವು ಕಡಿದಾಗ ವಿಮೆ ವಿತರಿಸುವದು, ಪರಿಶಿಷ್ಟ ಜಾತಿ, ಪಂಗಡ ಸಮುದಾಯದವರನ್ನು ಕಾಫಿ ಬೆಳೆಗಾರರನ್ನಾಗಿ ಮಾಡಲು ಶೇ.50ರಷ್ಟು ಸಹಾಯಧನ, ಪ್ರಧಾನಮಂತ್ರಿ ಸಿಂಚನಾ ಯೋಜನೆಯಡಿ 5 ಎಕರೆ ಒಳಗಡೆ ಇರುವ ಕಾಫಿ ತೋಟಗಳಿಗೆ ಸೌಲಭ್ಯ ವಿತರಿಸುವದಕ್ಕೆ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕಾಡಾನೆ ಹಾವಳಿ ತಡೆಗಟ್ಟಲು ಕೇಂದ್ರ ಸಚಿವರ ಭೇಟಿ, ರಕ್ಷಣಾ ಕ್ಷೇತ್ರದಲ್ಲಿ ಕಾಫಿ ಬಳಕೆಗೆ ಕ್ರಮ ಕೈಗೊಳ್ಳುವಂತೆ ಸಚಿವರ ಭೇಟಿಗೆ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ , ಅಧಿಕಾರಿ ಡಾ. ರಘು ರಾಮುಲು ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು ಎಂದು ತಿಳಿಸಿದರು.