ಮಡಿಕೇರಿ, ಫೆ. 5: ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಮುಸಲ್ಮಾನ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ಸಿನ ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.ನಗರದ ಕೂರ್ಗ್ ಕಮ್ಯುನಿಟಿ ಹಾಲ್‍ನಲ್ಲಿ ಇಂದು ಮುಸಲ್ಮಾನ ಮುಖಂಡರುಗಳು ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮುಂದಾಳತ್ವದಲ್ಲಿ ಸಭೆ ನಡೆಸಿದರು. ಅಲ್ಲದೆ ಜಾತ್ಯತೀತ ನಿಲುವಿನ ಕಾಂಗ್ರೆಸ್ ಈ ಬಾರಿ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಒಕ್ಕೊರಲಿನ ಬೇಡಿಕೆ ಸಲ್ಲಿಸಿದರು.ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೂ ಇದುವರೆಗೂ ಆ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್‍ನಿಂದ ಅವಕಾಶ ಸಿಕ್ಕಿಲ್ಲ. ಕಾಂಗ್ರೆಸ್ ಟಿಕೆಟ್ ಪಡೆದು ವೀರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿದ ಯಾವ ಅಭ್ಯರ್ಥಿಗಳು ಇತ್ತೀಚಿನ ವರ್ಷಗಳಲ್ಲಿ ಗೆಲುವು ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‍ನಿಂದ ಟಿಕೆಟ್‍ಗಾಗಿ ಒತ್ತಾಯ ಮಂಡಿಸಲು ಸಭೆ ತೀರ್ಮಾನಿಸಿದೆ.

ಈ ನಿಟ್ಟಿನಲ್ಲಿ ಒಂದು ವಾರದೊಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೆ.ಎಂ. ಇಬ್ರಾಹಿಂ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಹಾಲಿ ಜಿ.ಪಂ. ಸದಸ್ಯ ಲತೀಫ್, ಮಾಜಿ ಜಿ.ಪಂ. ಉಪಾಧ್ಯಕ್ಷ

ಪಿ.ಎಂ. ಖಾಸಿಂ

(ಮೊದಲ ಪುಟದಿಂದ) ಸೇರಿದಂತೆ ಜನಾಂಗದ ಅನೇಕ ಮುಖಂಡರು ಮಾತನಾಡಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಈ ಬಾರಿ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ವರಿಷ್ಠರನ್ನು ಆಗ್ರಹಪಡಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಯಾಕೂಬ್, ವಕ್ಛ್ ಸಲಹಾ ಸಮಿತಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ಮುಸ್ಲಿಂ ಹಿತರಕ್ಷಣಾ ವೇದಿಕೆ

ಅಧ್ಯಕ್ಷ ಹನೀಫ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲಾಂ, ಮಾದಾಪುರದ ಉಮ್ಮರ್, ಕೊಟ್ಟಮುಡಿ ಹಂಸ, ಇಸ್ಮಾಯಿಲ್ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ವಿಚಾರವಾಗಿ ಕೊಡವ ಮುಸ್ಲಿಂ ಅಸೋಸಿಯೇಷನ್ ಕೂಡ ಇತ್ತೀಚೆಗೆ ಸಭೆ ನಡೆಸಿ ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸಲು ತೀರ್ಮಾನ ಕೈಗೊಂಡಿರುವದನ್ನು ಇಲ್ಲಿ ಸ್ಮರಿಸಬಹುದು.