ಮಡಿಕೇರಿ, ಫೆ. 6: ನಗರದ ಬಾಲಭವನದಲ್ಲಿ ರಾಜ್ಯ ಟೈಲರ್ ಅಸೋಸಿಯೇಶನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಭೋದಕ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ನೇತ್ರದಾನ, ರಕ್ತದಾನ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಸದಸ್ಯತ್ವ ನೋಂದಣಿ ಮತ್ತು ಸದಸ್ಯತ್ವ ನವೀಕರಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ವೈದ್ಯಕೀಯ ಅಧೀಕ್ಷಕ ಡಾ. ಅಬ್ದುಲ್ ಅಜೀಜ್ ಮಾತನಾಡಿ, ಸಮಾಜಮುಖಿ ಕೆಲಸ ಮಾಡಲು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮುಂದಡಿಯಿಡಬೇಕು . ನೇತ್ರದಾನ, ರಕ್ತದಾನ ಶಿಬಿರದ ಅಗತ್ಯತೆಗಳು ಇಂದು ಹೆಚ್ಚಿದೆ. ತುರ್ತು ಸಂದರ್ಭದಲ್ಲಿ ಶೀಘ್ರದಲ್ಲಿಯೇ ರಕ್ತ ದೊರಕುವದು ವಿಳಂಬವಾಗುತ್ತದೆ. ಇಂತಹ ಶಿಬಿರದ ಮೂಲಕ ರಕ್ತವನ್ನು ಸಂಗ್ರಹಿಸಿಡಬಹುದು ಎಂದು ಮಾಹಿತಿ ನೀಡಿದರು.

ಕೆ.ಎಸ್.ಟಿ.ಎ. ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ಯು. ಅಷ್ರಪುನ್ನೀಸ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ, ಟೈಲರ್ಸ್ ಅಸೋಸಿಯೇಶನ್ ಮಡಿಕೇರಿ ಕ್ಷೇತ್ರ ಸಮಿತಿ ಇಂತಹ ಕಾರ್ಯಕ್ರಮ ಹಮ್ಮಿ ಕೊಂಡಿರುವದು ಸ್ವಾಗತಾರ್ಹವೆಂದರು.

ಮುಂದಿನ ದಿನಗಳಲ್ಲಿ ರಕ್ತ ವಿದಳನ ಘಟಕ ಆರಂಭವಾಗಲಿದ್ದು, ಈ ಘಟಕ ಆರಂಭವಾದಲ್ಲಿ ಓರ್ವ ವ್ಯಕ್ತಿಯ ರಕ್ತವನ್ನು ವಿಭಜಿಸಿ ನಾಲ್ಕು ಜನರಿಗೆ ನೀಡಲು ಸಾಧ್ಯವಿದೆ. ಇದರಿಂದ ಒಬ್ಬ ವ್ಯಕ್ತಿಯ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಯಲಿದೆ ಎಂದು ನೆನಪಿಸಿದರು.

ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ಡಾ. ಕಿರಣ್ ಭಟ್ ಮಾತನಾಡಿ, ವಯಸ್ಸಿನ ಮಿತಿಯಿಲ್ಲ ಯಾರು ಬೇಕಾದರೂ ನೇತ್ರವನ್ನು ದಾನ ಮಾಡಬಹುದು ಎಂದರು.

ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ ಮಾತನಾಡಿ, ಟೈಲರ್ಸ್ ಅಸೋಸಿಯೇಶನ್ ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯವನ್ನು ಮಾಡುತ್ತಿದೆ.

ಡಾ. ತೇಜಸ್ ಅವರು ಕೇಂದ್ರ ಹಾಗೂ ರಾಜ್ಯ ಸರಕಾರದ ಆರೋಗ್ಯ ಯೋಜನೆಯ ಬಗ್ಗೆ ಹಾಗೂ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿದಾರರಿಗೆ ಇರುವ ಹಲವಾರು ಆರೋಗ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಟೈಲರ್ಸ್ ಅಸೋಸಿಯೇಶನ್ ಕ್ಷೇತ್ರ ಸಮಿತಿ ಅಧ್ಯಕ್ಷ ವಸಂತ್ ಕುಲಾಲ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ದಂತ ತಜ್ಞೆ ಡಾ. ದೀಪ, ಆಯುಷ್ ವೈದ್ಯಕಾರಿ ಡಾ. ಶೈಲಜಾ, ಹೋಮಿಯೋಪತಿ ವೈದ್ಯಾಧಿಕಾರಿ ಡಾ.ಅರುಣ್ ಅಸೂಟಿ, ವಿಕಾಸ್ ಜನಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.