ಮಡಿಕೇರಿ, ಫೆ. 6: ಕೊಡಗಿನ ಸೈನಿಕ ಶಾಲೆಯಲ್ಲಿ 17ನೇ ಸ್ಥಳೀಯ ಆಡಳಿತ ಮಂಡಳಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಗೆ ಅಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳಾಗಿ ಏರ್ ವೈಸ್ ಮಾರ್ಷಲ್ ಎನ್.ಎಸ್. ವೈದ್ಯ, ವಿಎಸ್‍ಎಂ, ಹಿರಿಯ ಅಧಿಕಾರಿಗಳು, ಆಡಳಿತ ಕೇಂದ್ರಾಲಯ, ಟ್ರೈನಿಂಗ್ ಕಮಾಂಡ್, ಭಾರತೀಯ ವಾಯು ದಳ, ಬೆಂಗಳೂರು ಇವರು ಆಗಮಿಸಿದ್ದರು. ಇವರೊಂದಿಗೆ ಬೆಂಗಳೂರಿನ ಟ್ರೈನಿಂಗ್ ಕಮಾಂಡ್‍ನ ಕಮಾಂಡ್ ಎಜುಕೇಷನ್ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಬಿಕೆಇ ಜಾಕೊಬ್ ವಿಎಸ್‍ಎಂ ಆಗಮಿಸಿದ್ದರು. ಮೊದಲಿಗೆ ಕೆಡೆಟ್ ಪ್ರಣೀತ್ ನೇತೃತ್ವದ ಅಶ್ವದಳವು ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಪೆರೇಡ್ ಮೈದಾನಕ್ಕೆ ಕರೆತಂದಿತು. ನಂತರ ಕೆಡೆಟ್ ಅಭಿಷೇಕ್ ನೇತೃತ್ವದ ಪೆರೇಡ್ ತಂಡ ಮುಖ್ಯ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿತು. ಇದರೊಂದಿಗೆ ಮುಖ್ಯ ಅತಿಥಿಗಳು ಶಾಲೆಯ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ಸಭಾ ಕಾರ್ಯಕ್ರಮದಲ್ಲಿ ಮೊದಲಿಗೆ ಕೆಡೆಟ್ ಪ್ರತೀಕ್ ನೇತೃತ್ವದ ತಂಡವು ಮುಖ್ಯ ಅತಿಥಿಗಳಿಗೆ ಸ್ವಾಗತ ಗೀತೆಯನ್ನು ಹಾಡುವದರ ಮೂಲಕ ಸ್ವಾಗತ ಕೋರಿದರು.

ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಕೆಡೆಟ್ ವಿನಯ್ ‘ಭಾರತದ ರಕ್ಷಣೆಯ ಬಗ್ಗೆ ಬಲವಾಗಿ ನಂಬಿಕೆ ಹೊಂದಿದ್ದ ಫೀ.ಮಾ. ಕೆ.ಎಂ. ಕಾರ್ಯಪ್ಪ’ ವಿಷಯವನ್ನಾಧರಿಸಿ ಭಾಷಣ ಮಾಡಿದರು. ಈ ಸಂದರ್ಭ ಮಾತನಾಡಿದ ಮುಖ್ಯ ಅತಿಥಿಗಳು ‘ಕಳೆದ ಒಂದು ವರ್ಷದಲ್ಲಿ ಶಾಲೆಯು ಕೈಗೊಂಡ ಸಾಧನೆಗಳನ್ನು ಶ್ಲಾಘಿಸಿದರು. ಪ್ರಥಮ ಬಾರಿಗೆ ಶಾಲೆಯು ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಯುಪಿಎಸ್‍ಸಿ ಮತ್ತು ಎಸ್‍ಎಸ್‍ಬಿ ಸಂದರ್ಶನಕ್ಕೆ ಕಳುಹಿಸಿಕೊಟ್ಟಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಶಾಲೆಯಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಬದುಕನ್ನು ಸಾಕಾರಗೊಳಿಸಿಕೊಳ್ಳಲು ಎಲ್ಲಾ ವಿದ್ಯಾರ್ಥಿಗಳು ಕಂಕಣಬದ್ದರಾಗಿ ತಮ್ಮ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಶಾಲೆಗೂ, ಪೋಷಕರಿಗೂ ಒಳ್ಳೆಯ ಹೆಸರನ್ನು ತರಬೇಕೆಂದು ಕಿವಿಮಾತು ಹೇಳಿದರು.

ವಿಶೇಷ ಸಭೆಯಲ್ಲಿ ಶಾಲೆಯ ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಡಿ. ಮ್ಯಾಥ್ಯು, ಹಿರಿಯ ಶಿಕ್ಷಕ ಸೂರ್ಯನಾರಾಯಣ, ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಕೆಡೆಟ್ ನರೇಂದ್ರ ರೋಡಗಿ ಸ್ವಾಗತಿಸಿ, ನಿರೂಪಿಸಿದರು. ಮುಖ್ಯ ಅತಿಥಿಗಳು ಶಾಲೆಯ ಹನ್ನೊಂದನೇ ತರಗತಿಯ ವಿದ್ಯಾರ್ಥಿಗಳನ್ನುದ್ದೇಶಿಸಿ ಸಂವಾದ ನಡೆಸಿದರು.

17ನೇ ಸ್ಥಳೀಯ ಆಡಳಿತ ಮಂಡಳಿ ಸಭೆಯಲ್ಲಿ ನಂಜುಂಡೆಗೌಡ, ಅಪರ ಜಿಲ್ಲಾಧಿಕಾರಿ ಡಾ. ವಿ. ಪ್ರಸಾದ್, ಸಹ ಪ್ರಾಧ್ಯಾಪಕರು, ಪ್ರಾದೇಶಿಕ ಶಿಕ್ಷಣ ಮಹಾವಿದ್ಯಾಲಯ, ಮೈಸೂರು, ಡಿ. ಭಾರತಿ, ಕುಲಸಚಿವರು, ಮೈಸೂರು ವಿಶ್ವವಿದ್ಯಾಲಯ, ಡಿ.ಎಸ್. ನಾಯಕ್, ಹಿರಿಯ ಅಭಿಯಂತರರು, ಸಿಪಿಡಬ್ಲ್ಯೂಡಿ, ಮೈಸೂರು, ವಿಜಯಲಕ್ಷ್ಮಮ್ಮ, ಹಿರಿಯ ಸಹಾಯಕ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು, ಮುರ್ತುಜಾ ಎ. ಬಾಗವನ್, ಪೋಷಕ ಪ್ರತಿನಿಧಿ ಭಾಗಹಿಸಿದ್ದರು.