ಗೋಣಿಕೊಪ್ಪಲು, ಫೆ.6 : ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಆನೆ- ಮಾನವ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಕಾಣಲು ತಾ.23ರಂದು ಮಡಿಕೇರಿಯ ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ತಿತಿಮತಿಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜನೆ ಗೊಂಡಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ವಕೀಲ ಹೇಮಚಂದ್ರ ಅನೇಕ ಜೀವಗಳನ್ನು ಅರಣ್ಯದ ವನ್ಯಜೀವಿಗಳಿಂದ ನಾವು ಕಳೆದು ಕೊಂಡಿದ್ದೇವೆ. ಕಾಡಿನಲ್ಲಿರುವ ಕಾಡಾನೆ ಗಳು ತೋಟಗಳಿಗೆ ಲಗ್ಗೆ ಇಟ್ಟಿವೆ. ಕೋಟ್ಯಾಂತರ ಬೆಲೆ ಬಾಳುವ ಫಸಲುಗಳು ನಾಶವಾಗಿದೆ.ಅರಣ್ಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸುವಲ್ಲಿ ಸತತವಾಗಿ ವಿಫಲರಾಗುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯನ್ನು ನಿಯಂತ್ರಿಸಲು ಕರ್ನಾಟಕ ರಾಜ್ಯ ರೈತ ಸಂಘ ಮುಂದಾಳತ್ವದಲ್ಲಿ ಕಾರ್ಮಿಕರ ಒಕ್ಕೂಟ, ಬೆಳೆಗಾರರು, ರೈತರು ಒಟ್ಟಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಈ ಹೋರಾಟಕ್ಕೆ ರಾಜಕೀಯ ರಹಿತವಾಗಿ ಎಲ್ಲರೂ ಸೇರಲೇಬೇಕಾದ ಅನಿವಾರ್ಯತೆ ಬಂದಿದೆ ಆನೆ ಧಾಳಿಯಿಂದ ಸಾವಿಗೀಡಾದವರಿಗೆ ಅರಣ್ಯ ಇಲಾಖೆ ದಯಾತ್ಮಕ ಪರಿಹಾರ ನೀಡುತ್ತಿದೆ. ಇದನ್ನು ಬಹಿರಂಗವಾಗಿ ನಾವು ಖಂಡಿಸಲೇ ಬೇಕಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ರೈತ ಸಂಘದ ಹೋರಾಟದಿಂದ ಜಿಲ್ಲೆಯಲ್ಲಿ ಹಲವು ಪ್ರಕರಣಗಳಲ್ಲಿ ನ್ಯಾಯದೊರಕಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲು ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಆನೆ ಮಾನವ ಸಂಘರ್ಷ ತಡೆಯಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಂಪೂರ್ಣವಾಗಿ ಸತತ 30 ವರ್ಷಗಳಿಂದ ವಿಫಲರಾಗುತ್ತಿದ್ದಾರೆ.ಕೋಟ್ಯಾಂತರ ಹಣವು ಇಲಾಖೆಯಲ್ಲಿದ್ದರು. ಇದು ಸರಿಯಾಗಿ ವಿನಿಯೋಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.ಈ ಉದ್ದೇಶದಿಂದ ರೈತರಿಗೆ ಕಾರ್ಮಿಕರಿಗೆ ಬೆಳೆಗಾರರಿಗೆ ನ್ಯಾಯ ಸಿಗಲೇಬೇಕೆಂಬ ಉದ್ದೇಶದಿಂದ ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಲಾಗುವದು. ನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು. ರೈತ ಮುಖಂಡ ಆದೇಂಗಡ ಅಶೋಕ್ ಮಾತನಾಡಿ, ಜಿಲ್ಲೆಯ ಶಾಸಕರು, ಸಂಸದರು ಜನಪ್ರತಿನಿಧಿಗಳು ಈ ಬೃಹತ್ ಹೋರಾಟದಲ್ಲಿ ಬಾಗವಹಿಸಿ ಜಿಲ್ಲೆಯ ಜನತೆಯ ಪರ ನಿಲ್ಲುವಂತೆ ತಿಳಿಸಿದರು.

ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳೆಗಾರರ ಒಕ್ಕೂಟದ ಸದಸ್ಯರಾದ ಸೆರಿ ಸುಬ್ಬಯ್ಯ ಅರಣ್ಯದಲ್ಲಿರುವ ಸಮಸ್ಯೆಯ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಬೆಳೆಗಾರರ ಮುಖಂಡರಾದ ಕಂಬೀರಂಡ ನಂದಾಗಣಪತಿ, ಪುಚ್ಚಿಮಾಡ ಸುಭಾಷ್, ಪುಚ್ಚಿಮಾಡ ಅಶೋಕ್, ಮಂಡೇಪಂಡ ಅರ್ಜುನ್, ಮಹೇಶ್, ಚೆಪ್ಪುಡೀರ ಕಾರ್ಯಪ್ಪ, ಚೆಪ್ಪುಡೀರ ಮನು, ರೈತ ಸಂಘದ ಮುಖಂಡರಾದ ಪುಚ್ಚಿಮಾಡ ಸಂತೋಷ್, ತೀತರಮಾಡ ರಾಜ ಮುಂತಾದವರು ಭಾಗವಹಿಸಿದ್ದರು.