*ಗೋಣಿಕೊಪ್ಪಲು, ಫೆ. 6 : ತಾ.ಪಂ. ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ತೀರ್ಮಾನ ಕೈಗೊಳ್ಳಲು ಸಭೆ ನಿರ್ಧರಿಸಬೇಕು ಎಂದು ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಸೂಚಿಸಿದರು. ಪೆÇನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದರು.

ತಾಲೂಕಿನ ಅಭಿವೃದ್ಧಿ ದೃಷಿಯಿಂದ ಅಧಿಕಾರಿಗಳನ್ನು ಪ್ರಗತಿ ಪರಿಶೀಲನಾ ಸಭೆಗೆ ನಿಯಮದಂತೆ ಆಹ್ವಾನಿಸಿದರೂ, ಪ್ರಗತಿ ಪರಿಶೀಲನೆ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಕಂದಾಯ ಇಲಾಖೆ ಸಭೆಗಳಿಗೆ ಗೈರುಹಾಜರಾಗುವ ಮೂಲಕ ಜನರ ದೂರುಗಳನ್ನು ಅಧಿಕಾರಿಗಳಲ್ಲಿ ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ ಮತ್ತು ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ ಈ ಕಾರಣ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುವದೇ ಸೂಕ್ತ ಎಂದು ಸಭೆಯಲ್ಲಿ ತಿಳಿಸಿದರು.

ಗೋಣಿಕೊಪ್ಪಲು ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಬಡವರನ್ನು ಸುಲಿಗೆ ಮಾಡಲಾಗುತ್ತಿದೆ. ಪ್ರತಿಯೊಂದು ಚಿಕಿತ್ಸೆಗೂ ವೈದ್ಯಾಧಿಕಾರಿ ಡಾ|| ಸುರೇಶ್, ದಾದಿಯರು ಹಾಗೂ ಸಿಬ್ಬಂದಿ ಹಣ ವಸೂಲಿ ಮಾಡುವ ದಂಧೆಗಿಳಿದಿದ್ದಾರೆ. ಶ್ರೀಮಂತರಿಗೆ ಒಂದು ರೀತಿಯ ಚಿಕಿತ್ಸೆ, ಬಡವರಿಗೆ ಮತ್ತೊಂದು ರೀತಿಯ ಚಿಕಿತ್ಸೆ ಎಂಬ ಬೇದಬಾವದಲ್ಲಿ ವೈದ್ಯಾಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಬಡವರಿಗಾಗಿ ನಿರ್ಮಿತವಾದ ಆರೋಗ್ಯ ಕೇಂದ್ರಕ್ಕೆ ವೈದ್ಯಾಧೀಕಾರಿ ಹಾಗೂ ದಾದಿಯರು ಹಣಕ್ಕಾಗಿ ಪೀಡಿಸುವದರಿಂದ ಆರೋಗ್ಯ ಕೇಂದ್ರಕ್ಕೆ ಹೋಗಲು ಭಯಪಡುತ್ತಾರೆ ಹೀಗಾಗಿ ಅಧಿಕಾರಿ ಹಾಗೂ ದಾದಿಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಮಾಹಿತಿ ನೀಡಬೇಕು ಎಂದು ಚಲನ್ ಕುಮಾರ್ ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಯತಿರಾಜ್ ಅವರಿಗೆ ಸೂಚಿಸಿದರು.

ಶಾಲಾ ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು, ಬೇಸಿಗೆ ಪ್ರಾರಂಭವಾಗುತ್ತಿರುವದರಿಂದ ನೀರಿನ ಅಭಾವ ಎದುರಾಗಲಿದೆ. ಸಮಸ್ಯೆ ಉದ್ಭವಿಸುವ ಮೊದಲೇ ಕುಡಿಯುವ ನೀರು ಕಲ್ಪಿಸಲು ಗ್ರಾಮೀಣ ಕುಡಿಯುವ ನೀರು ಸರಬರಾಜು ಉಪವಿಭಾಗ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ತಿಳಿಸಿದರು.

ತೋಟಗಾರಿಕೆ ಇಲಾಖೆ ತಾಲೂಕಿನ ನಿಷ್ಕ್ರೀಯವಾಗಿದೆ ಬೆಳೆಗಾರರು ಇದರ ಫಲಾನುಭವಿ ಗಳಾಗುತ್ತಿಲ್ಲ. ಕೆಲವು ಮಂದಿಯನ್ನು ಸೇರಿಸಿ ಕಾಟಚಾರಕ್ಕೆ ಕಾರ್ಯಕ್ರಮ ಗಳನ್ನು ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ತಾಲೂಕು ಅಧಿಕಾರಿಯ ಗೈರು ಕಾಣುತ್ತಿದೆ. ಅಧಿಕಾರಿ ಉತ್ತಮ ಸೇವೆ ನೀಡಲು ಕಾಳಜಿ ವಹಿಸಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆಯಲ್ಲಿ 2400 ಹಕ್ಕುಪತ್ರ ವಿಲೇವಾರಿ ನಡೆದಿದೆ. 1400 ಹಕ್ಕು ಪತ್ರಗಳು ವಿಲೇವಾರಿ ಮಾಡ ಬೇಕಾಗಿದೆ ಎಂದು ಪೆÇನ್ನಂಪೇಟೆ ಕಂದಾಯ ಪರಿವೀಕ್ಷಕ ರಾಧಕೃಷ್ಣ ಸಭೆಗೆ ಮಾಹಿತಿ ನೀಡಿದರು.

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಗಳಿಸುವಂತೆ ಶಾಲೆಯಲ್ಲಿ ಉತ್ತಮ ತರಬೇತಿ ನೀಡಲು ಶಿಕ್ಷಕರು ಕ್ರಮ ಕೈಗೊಂಡಿದ್ದು, ಮುಂದಿನ ಫಲಿತಾಂಶ ಉತ್ತಮವಾಗಿ ಬರಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದರು. ಕೃಷಿ ಇಲಾಖೆ, ಪಶು ಸಂಗೋಪನೆ, ಮೀನುಗಾರಿಕೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಸಮಾಜ ಕಲ್ಯಾಣ, ಅಕ್ಷರ ದಾಸೋಹ, ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ, ಚೆಸ್ಕಾಂ, ಕಾರ್ಮಿಕ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಅಭಿವೃದ್ಧಿಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಮೊದಲಾದವರು ಉಪಸ್ಥಿತರಿದ್ದರು.