ಮಡಿಕೇರಿ,ಫೆ.6: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವು ತಾ. 12 ರಂದು ಅಂಗನವಾಡಿ, ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಮಾಹಿತಿ ನೀಡಿದ್ದಾರೆ.

ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಯನ್ನು ಜಿಲ್ಲೆಯ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತದೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಯನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ಅಪೌಷ್ಠಿಕತೆ ಮತ್ತು ರಕ್ತಹೀನತೆಯಿಂದಾಗಿ ಮಕ್ಕಳು ಬಳಲುವದನ್ನು ತಪ್ಪಿಸುವದು ಜಂತುಹುಳು ನಿವಾರಣಾ ಕಾರ್ಯಕ್ರಮದ ಉದ್ದೇಶವಾಗಿದೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಂತುಹುಳು ನಾಶಕ ಮಾತ್ರೆ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ತಾ.12 ರಂದು ಜಂತುಹುಳು ನಾಶಕ ಮಾತ್ರೆಯನ್ನು ಪಡೆಯದ ಮಕ್ಕಳಿಗೆ ತಾ.17 ರಂದು ನೀಡಲಾಗುತ್ತದೆ. ಜಂತುಹುಳು ಬಾಧಿತ ಮಕ್ಕಳು ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಸುಸ್ತು ಮತ್ತು ನಿಶಕ್ತಿಯಿಂದ ಬಳಲುತ್ತಾರೆ. ಆದ್ದರಿಂದ ಜಂತುಹುಳು ನಿವಾರಣಾ (ಅಲ್ಬೆಂಡಾಝೋಲ್) ಮಾತ್ರೆ ನೀಡಲಾಗುತ್ತದೆ. ಜಂತುಹುಳು ನಿವಾರಣಾ ಮಾತ್ರೆಯು ಸುರಕ್ಷಿತವಾಗಿದ್ದು, ಯಾವದೇ ಅಡ್ಡ ಪರಿಣಾಮ ಉಂಟಾಗುವದಿಲ್ಲ ಎಂದು ಅವರು ತಿಳಿಸಿದರು.

ಆರ್‍ಸಿಎಚ್ ಅಧಿಕಾರಿ ಡಾ.ನೀಲೇಶ್ ಮಾತನಾಡಿ, ಜಂತುಹುಳು ಮಾತ್ರೆಯನ್ನು ಅಗಿದು ತಿನ್ನಬೇಕು. ಮಕ್ಕಳಲ್ಲಿ ಕಂಡುಬರುವ ಜಂತುಹುಳು, ಕೊಕ್ಕೆಹುಳುವಿನಿಂದಾಗಿ ವಿಟಮಿನ್ ಕೊರತೆಯಿಂದಾಗಿ ದೈಹಿಕ ಬೆಳವಣಿಗೆ ಕುಗ್ಗುತ್ತದೆ. ಇದರಿಂದ ಮಕ್ಕಳು ಶಾಲೆಗೆ ಹಾಜರಾಗುವದು ಕಡಿಮೆ ಆಗುತ್ತದೆ. ಆದ್ದರಿಂದ ಮಕ್ಕಳ ಬೌದ್ಧಿಕ ಬೆಳವಣಿಗೆ ಹೆಚ್ಚಿಸಲು ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ತಾ. 12 ರಂದು ಎಲ್ಲಾ ಶಾಲೆ ಮತ್ತು ಅಂಗನವಾಡಿಯಲ್ಲಿ ವಿತರಣೆ ಮಾಡುತ್ತೇವೆ. ಜಂತುಹುಳು ಬಾಧೆಗೆ ಒಳಗಾಗಿದ್ದರೆ ಅಪೌಷ್ಠಿಕತೆ, ರಕ್ತಹೀನತೆ, ವಿಟಮಿನ್ ಕೊರತೆ, ದೈಹಿಕ ಬೆಳವಣಿಗೆ, ಕುಂಠಿತವಾಗುತ್ತದೆ ಹಾಗೆಯೇ ಶೈಕ್ಷಣಿಕ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ ಮಕ್ಕಳು 1,28,945 ಇದರಲ್ಲಿ ಅಂಗನವಾಡಿ ಮಕ್ಕಳಿದ್ದಾರೆ. 30,498 ಅಂಗನವಾಡಿಯಿಂದ ಹೊರಗುಳಿದ ಮಕ್ಕಳು 1,947 ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳು 4,799 ಆಗಿದ್ದು, ಜಿಲ್ಲೆಯಲ್ಲಿ ಶಾಲೆ ಮತ್ತು ಪದವಿ ಪೂರ್ವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಸಂಖ್ಯೆ 91,701 ಆಗಿರುತ್ತದೆ. ಒಟ್ಟಾರೆ ಈ ವರ್ಷ 1,28,945 ಮಕ್ಕಳಿಗೆ ಅಲ್ಪೆಂಡಾಝೋಲ್ ಮಾತ್ರೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಎಲ್ಲಾ ಪ್ರಾಥಮಿಕ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದೆ ಕಳೆದ ವರ್ಷ ಶೇ.98.74 ರಷ್ಟು ಪ್ರಗತಿಯನ್ನು ಸಾಧಿಸಲಾಗಿತ್ತು ಎಂದು ಆರ್‍ಸಿಎಚ್ ಅಧಿಕಾರಿ ಡಾ.ನೀಲೇಶ್ ತಿಳಿಸಿದರು ಮಡಿಕೇರಿ ತಾಲ್ಲೂಕಿನಲ್ಲಿ 209 ಶಾಲೆಗಳು, ಪದವಿ ಪೂರ್ವ ಕಾಲೇಜುಗಳು 16 ಹಾಗೂ 251 ಅಂಗನವಾಡಿಗಳನ್ನು ಹೊಂದಿದೆ. ವೀರಾಜಪೇಟೆ ತಾಲ್ಲೂಕಿನಲ್ಲಿ 232 ಶಾಲೆಗಳು ಪದವಿ ಪೂರ್ವ ಕಾಲೇಜುಗಳು 17 ಹಾಗೂ ಅಂಗನವಾಡಿಗಳನ್ನು ಹೊಂದಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 251 ಶಾಲೆಗಳು ಪದವಿ ಪೂರ್ವ ಕಾಲೇಜುಗಳು 24 ಹಾಗೂ 284 ಅಂಗನವಾಡಿಗಳನ್ನು ಹೊಂದಿವೆ ಎಂದು ಆರ್‍ಸಿಎಚ್‍ಒ ಡಾ. ನೀಲೇಶ್ ತಿಳಿಸಿದರು.