ಸೋಮವಾರಪೇಟೆ,ಫೆ.2: ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಹಾಸ್ಟೆಲ್‍ಗಳಿಗೆ ಸಮರ್ಪಕವಾಗಿ ಅಕ್ಕಿ ಪೂರೈಕೆಯಾಗುತ್ತಿಲ್ಲ ಎಂಬ ಮಾಹಿತಿ ಅಧಿಕಾರಿಗಳಿಂದಲೇ ವ್ಯಕ್ತವಾದ ಹಿನ್ನೆಲೆ, ರಾಜ್ಯ ಸರ್ಕಾರ ಅನೇಕ ಭಾಗ್ಯಗಳೊಂದಿಗೆ ಹಾಸ್ಟೆಲ್ ಮಕ್ಕಳಿಗೆ ಉಪವಾಸ ಭಾಗ್ಯ ನೀಡಿದೆ ಎಂದು ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ವ್ಯಂಗ್ಯವಾಡಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಉಪಸ್ಥಿತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಕಳೆದ ಅಕ್ಟೋಬರ್ ತಿಂಗಳಿನಿಂದ ಹಾಸ್ಟೆಲ್‍ಗಳಿಗೆ ಅಕ್ಕಿ ಸರಬರಾಜು ಸ್ಥಗಿತಗೊಂಡಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹಾಸ್ಟೆಲ್‍ಗಳ ಮೇಲ್ವಿಚಾರಕರು ಬಹಿರಂಗಪಡಿಸಿದ ಹಿನ್ನೆಲೆ ಈ ಬಗ್ಗೆ ಚರ್ಚೆ ನಡೆಯಿತು.

ಅಕ್ಟೋಬರ್ ತಿಂಗಳಿನಿಂದ ಅಕ್ಕಿ ಸರಬರಾಜು ಆಗುತ್ತಿಲ್ಲ. ಅಕ್ಕಿ ಸೇರಿದಂತೆ ಇತರ ಪಡಿತರ, ಸ್ನ್ಯಾಕ್ಸ್‍ಗಳಿಗಾಗಿ ಪ್ರತಿ ವಿದ್ಯಾರ್ಥಿಗೆ ಸರ್ಕಾರದಿಂದ ಬಿಡುಗಡೆಯಾಗುವ ಹಣದಲ್ಲೇ ಇದೀಗ ಅಕ್ಕಿ ಖರೀದಿಸುತ್ತಿದ್ದೇವೆ. ಅಕ್ಕಿ ಖರೀದಿಗೆ ಟೆಂಡರ್ ದರ 21 ಇದ್ದು, ರೂ. 30 ನೀಡಿ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ ಮೊಟ್ಟೆ, ಬಿಸ್ಕತ್, ಸ್ನ್ಯಾಕ್ಸ್‍ಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬಹುತೇಕ ವಾರ್ಡನ್‍ಗಳು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭ ಮಾತನಾಡಿದ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರು, ರಾಜ್ಯ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಬೀಗುತ್ತಿದ್ದು, ಹಾಸ್ಟೆಲ್ ಮಕ್ಕಳಿಗೆ ಸರಿಯಾಗಿ ಅಕ್ಕಿ ಸರಬರಾಜು ಮಾಡದೇ ಇದೀಗ ಉಪವಾಸ ಭಾಗ್ಯ ನೀಡುತ್ತಿದೆ ಎಂದು ಟೀಕಿಸಿದರಲ್ಲದೇ, ಈ ಬಗ್ಗೆ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ, ಜಿಲ್ಲಾಧಿಕಾರಿ, ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲು ಸೂಚಿಸಿದರು.

ತಾಲೂಕಿನಾದ್ಯಂತ ಇರುವ ಹಾಸ್ಟೆಲ್‍ಗಳ ಸ್ಥಿತಿಗತಿಗಳ ಸಂಪೂರ್ಣ ವಿವರ ಪಡೆದ ಉಪಾಧ್ಯಕ್ಷರು, ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳನ್ನು ಹೊಂದಿರುವ ಹಾಸ್ಟೆಲ್‍ಗಳು ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದರೆ ವಾರ್ಡನ್‍ಗಳಿಗೆ 1000 ರೂ. ಬಹುಮಾನ ನೀಡುವದಾಗಿ ಘೋಷಿಸಿದರು.

ಫಲಿತಾಂಶದ ಪ್ರಗತಿಯಲ್ಲಿ ಕುಂಠಿತಗೊಂಡರೆ ಸಂಬಂಧಿಸಿದ ವಾರ್ಡನ್‍ಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಎಚ್ಚರಿಸಿದ ಅಭಿಮನ್ಯುಕುಮಾರ್, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಮೇಲ್ವಿಚಾರಕರ ಪಾತ್ರ ಮಹತ್ವದ್ದು ಎಂದು ಅಭಿಪ್ರಾಯಿಸಿದರು.

ಹಾಸ್ಟೆಲ್‍ಗಳಲ್ಲಿ ತಂಗಿರುವ ವಿದ್ಯಾರ್ಥಿಗಳ ವಿವರ, ಶೈಕ್ಷಣಿಕ ಪ್ರಗತಿ, ಆರೋಗ್ಯ ಸಂಬಂಧಿತ ತೆಗೆದುಕೊಂಡಿರುವ ಕ್ರಮಗಳು, ಹಾಸಿಗೆ, ಬಿಸಿ ನೀರಿನ ವ್ಯವಸ್ಥೆ, ಸೋಲಾರ್ ವ್ಯವಸ್ಥೆ, ಆವರಣಗೋಡೆ, ಕಟ್ಟಡದ ಸ್ಥಿತಿಗತಿಗಳ ಬಗ್ಗೆ ತಾಲೂಕಿನ ಎಲ್ಲಾ ಹಾಸ್ಟೆಲ್‍ಗಳ ಮೇಲ್ವಿಚಾರಕರಿಂದ ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರು ಮಾಹಿತಿ ಪಡೆದರು.

ಸಭೆಯಲ್ಲಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಸದಸ್ಯೆ ಹೆಚ್.ಎನ್. ತಂಗಮ್ಮ, ಬಿ.ಸಿ.ಎಂ. ವಿಸ್ತರಣಾಧಿಕಾರಿ ಸ್ವಾಮಿ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.