ಸಿದ್ದಾಪುರ, ಫೆ.2: ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬಾ ಶಾಹ್-ವಲಿಯವರ ಉರೂಸ್‍ಗೆ ಪಾಲಿಬೆಟ್ಟ ಜುಮಾ ಮಸೀದಿ ಅಧ್ಯಕ್ಷ ಸಿ.ಎಂ ಅಬ್ದುಲ್ ಜಬ್ಬಾರ್ ಧ್ವಜಾರೋಹಣ ನೆರವೇರಿಸಿದರು.
ಜುಮಾ ಮಸೀದಿ ಖತೀಬ್ ಅಲಿ ಸಖಾಫಿ ಪ್ರಾರ್ಥನೆಯ ಮೂಲಕ ಉದ್ಘಾಟಿಸಿದರು. ಕೊಡಂಗಲ್ಲೂರು ಪಿ.ಎಂ.ಎಸ್ ತಂಙಳ್ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಮತ್ತು ದುಆ ನೆರವೇರಿಸಿದ ನಂತರ ಮಾತನಾಡಿ, ದರ್ಗಾಗಳು ಸೌಹಾರ್ದತೆಯ ಸಂಕೇತದ ಕೇಂದ್ರಗಳಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತ ದೇಶದಲ್ಲಿ ಅಜ್ಮೀರ್ ಸೇರಿದಂತೆ ಸಾಕಷ್ಟು ದರ್ಗಾಗಳಿದ್ದು, ಹಲವಾರು ಮಂದಿ ತಮ್ಮ ರೋಗ ರುಜಿನಗಳಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ. ಎಲ್ಲಾ ಧರ್ಮಿಯರು ದರ್ಗಾಗಳಿಗೆ ಭೇಟಿ ನೀಡಿ ತಮ್ಮ ಕಷ್ಟಗಳಿಗೆ ಪ್ರಾರ್ಥನೆ ಸಲ್ಲಿಸುತ್ತಿರುವದು ಉತ್ತಮ ಬೆಳವಣಿಗೆ. ಯಾವದೇ ಧರ್ಮಿಯರನ್ನು ನಿಂದಿಸಬಾರದು ಎಂದ ಅವರು ನಾವು ಒಂದೇ ಎಂಬ ಸಂದೇಶವನ್ನು ಜೀವನದಲ್ಲಿ ಅಳವಡಿಸಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭ ಸಮಿತಿಯ ಪದಾಧಿಕಾರಿಗಳು ಹಾಗೂ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಾ. 5ರ ವರೆಗೆ ಉರೂಸ್ ನಡೆಯಲಿದೆ.
-ವರದಿ: ವಾಸು