ವೀರಾಜಪೇಟೆ, ಫೆ. 2: ಪಟ್ಟಣದಲ್ಲಿ ಕ್ರೀಡಾ ಪಂದ್ಯಾವಳಿಯನ್ನು ಆಯೋಜಿಸಿ ಕ್ರೀಡಾಸಕ್ತರನ್ನು ಒಂದುಗೂಡಿಸಿ ಕ್ರೀಡೆಗಳಿಗೆ ಉತ್ತೇಜನ ನೀಡುವದು ಉತ್ತಮ ಬೆಳವಣಿಗೆಯಾಗಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಅಧ್ಯಕ್ಷ ಹೆಚ್.ಎಸ್. ಮತೀನ್ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ಕೂರ್ಗ್ ಕೇಬಲ್ ಬಾಯ್ಸ್ ಸಂಸ್ಥೆ ತಾಲೂಕು ಮೈದಾನದಲ್ಲಿ ಆಯೊಜಿಸಿದ್ದ ಪುರುಷರ ರಾಜ್ಯ ಮಟ್ಟದ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿಯ ಅಧ್ಯಕ್ಷ ರಚನ್ ಮೇದಪ್ಪ ಮಾತನಾಡಿ, ಕ್ರೀಡಾ ಪ್ರತಿಭೆಗಳ ಬೆಳವಣಿಗೆಗೆ ಪಂದ್ಯಾಟವು ಉಪಯುಕ್ತವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಬಿ. ಹರ್ಷವರ್ಧನ್, ಕೊಡಗು ಜಿಲ್ಲಾ ಕಾಂಗ್ರೆಸ್ ಸೇವಾದಳದ ಉಪಾಧ್ಯಕ್ಷ ಸೈನುದ್ದೀನ್, ಉದ್ಯಮಿ ಸಂತೋಷ್ ಉಪಸ್ಥಿತರಿದ್ದರು.
ಉದ್ಘಾಟನಾ ಪಂದ್ಯವು ಸಿ.ಸಿ.ಬಿ. ವೀರಾಜಪೇಟೆ ಮತ್ತು ಮಿಲನ್ ಬಾಯ್ಸ್ ಅಮ್ಮತಿ ತಂಡಗಳ ನಡುವೆ ನಡೆದು 1-0 ಗೋಲುಗಳಿಂದ ಮಿಲನ್ ಬಾಯ್ಸ್ ತಂಡವು ಗೆಲುವು ಸಾದಿಸಿತು. ಇಂದು ನಡೆದ ಪಂದ್ಯಾವಳಿಯಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದು, 7 ತಂಡಗಳು ಮುಂದಿನ ಸುತ್ತಿಗೆ ಅರ್ಹತೆಯನ್ನು ಪಡೆದಿದೆ. ಅಂತಿಮ ಪಂದ್ಯಾಟ ಭಾನುವಾರದಂದು ನಡೆಯಲಿದೆ.