ಮಡಿಕೇರಿ, ಫೆ.2 : ದಶಕಗಳ ಹಿಂದೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳಿಂದ ಪ್ರತಿಷ್ಠಾಪಿಸಲ್ಪಟ್ಟು, ಸಮಾಜದ ವಿವಿಧ ವರ್ಗಗಳ ಸಮುದಾಯಗಳನ್ನು ಒಂದಾಗಿ ಬೆಸೆಯುತ್ತಿರುವ ಮಲ್ಲಿಕಾರ್ಜುನ ನಗರದ ಶ್ರೀಕೋದಂಡ ರಾಮ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಅಷ್ಟಮಂಗಲ ಪ್ರಶ್ನೆಯಂತೆ ಅಂದಾಜು 2.50 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ.ಎಂ.ಗಣೇಶ್ ತಿಳಿಸಿದ್ದಾರೆ.

ಮಾತನಾಡಿದ ಅವರು ಆರಂಭದಲ್ಲಿ ಭಜನಾಮಂದಿರವಾಗಿ ನಂತರದ ವರ್ಷಗಳಲ್ಲಿ ಶ್ರೀ ಕೋದಂಡ ರಾಮನ ದೇಗುಲವಾಗಿ ಭಕ್ತರನ್ನು ತನ್ನೆಡೆಗೆ ಸೆಳೆÉಯುತ್ತಿರುವ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳಿಗೆ ಫೆಬ್ರವರಿ 5 ರಂದು ಚಾಲನೆ ನೀಡಲಾಗುವದೆಂದರು.

ಈ ದೇವಸ್ಥಾನದಿಂದ ಕಳೆದ 47 ವರ್ಷಗಳಿಂದ ದಸರಾ ಮಂಟಪ ವನ್ನು ಹೊರಡಿಸಲಾಗುತ್ತಿದೆಯಲ್ಲದೆ, ರಾಮನವಮಿಯಂದು ವಿವಿಧ ಸಮುದಾಯಗಳ ಸಹಸ್ರಾರು ಭಕ್ತಾದಿಗಳು ಒಗ್ಗೂಡಿ ಉತ್ಸವವನ್ನು ಆಚರಿಸುವದು ಅತ್ಯಂತ ವಿಶೇಷವಾಗಿದೆ ಎಂದು ತಿಳಿಸಿದರು.

ಜೀರ್ಣೋದ್ಧಾರ ಸಮಿತಿಯ ಸಲಹೆಗಾರರಾದ ಜಿ. ರಾಜೇಂದ್ರ ಮಾತನಾಡಿ, ನಗರದ ಮಲ್ಲಿಕಾರ್ಜುನ ನಗರದಲ್ಲಿನ ಶ್ರೀ ಕೋದಂಡ ರಾಮನ ದೇವಾಲಯ ಜಾತೀಯತೆಯ ಭೇದಗಳನ್ನು ಮೀರಿ ಎಲ್ಲ ಸಮುದಾಯಗಳ ಶ್ರದ್ಧಾ ಕೇಂದ್ರವಾಗಿದೆ. ಕೂಡಿಗೆಯಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನವಿದೆಯಾದರೆ, ಶ್ರೀಕೋದಂಡ ರಾಮನ ದೇವಾಲಯ ಮತ್ತೆಲ್ಲೂ ಕಂಡುಬಾರದ ಅತ್ಯಪ ರೂಪದ ಧಾರ್ಮಿಕ ಕೇಂದ್ರವೆಂದು ಬಣ್ಣಿಸಿದರು.

ಪರಿಶಿಷ್ಟ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಮಲ್ಲಿಕಾರ್ಜುನ ನಗರದಲ್ಲಿನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಅಲ್ಲಿನ ಯುವ ಸಮುದಾಯ ಶ್ರಮದಾನದ ಮೂಲಕ ತನ್ನ ನೆರವನ್ನು ನೀಡುತ್ತಿರುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಭವ್ಯ ದೇಗುಲ

ಪ್ರಸ್ತುತ ಶ್ರೀ ಕೋದಂಡ ರಾಮ ದೇವಾಲಯ ತಗ್ಗಿನ ಪ್ರದೇಶದಲ್ಲಿದೆ. ಇದೀಗ ನೂತನ ದೇವಾಲಯವನ್ನು ಮೆಟ್ಟಿಲುಗಳನ್ನೇರಿಕೊಂಡು ತೆರಳುವಂತೆ ನಿರ್ಮಿಸಲು ಯೋಜಿಸಲಾಗಿದೆ. ಗರ್ಭಗುಡಿಯಲ್ಲಿನ ದೇವರ ವಿಗ್ರಹ ನೆಲದ ಮಣ್ಣನ್ನು ಸ್ಪರ್ಶಿಸುವಂತೆ ಇದ್ದಲ್ಲಿ ಅದರಲ್ಲಿ ದೈವಿಕ ಶಕ್ತಿಗಳು ಹೆಚ್ಚಾಗಿ ಮೂಡುತ್ತದೆ ಎನ್ನುವ ವಿಚಾರಗಳ ಹಿನ್ನೆಲೆಯಲ್ಲಿ, ತಳ ಹಂತದಿಂದಲೆ ಗರ್ಭಗುಡಿಯನ್ನು ಮೇಲಕ್ಕೆ ಏರಿಸಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ರೀತಿಯ ನಿರ್ಮಾಣ ಕಾರ್ಯ ಬೇರೆಲ್ಲು ಕಂಡು ಬರುವದಿಲ್ಲವೆಂದು ರಾಜೇಂದ್ರ ತಿಳಿಸಿದರು.

ನೂತನ ದೇವಸ್ಥಾನದ ಮೇಲ್ಭಾಗದಲ್ಲಿ ಶ್ರೀಕೋದಂಡ ರಾಮನ ದೇವಾಲಯ ನಿರ್ಮಾಣವಾಗಲಿದ್ದು, ಕೆಳ ಭಾಗದಲ್ಲಿ ಭವ್ಯ ಸಭಾಮಂಟಪ (ಕಲ್ಯಾಣ ಮಂಟಪ), ನೈವೇದ್ಯ ಕೋಣೆ ನಿರ್ಮಾಣವಾಗಲಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚಿಸಿರುವಂತೆ ಮುಂದಿನ 2 ವರ್ಷಗಳ ಅವಧಿಯ ಒಳಗಾಗಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ನೆರವಿಗೆ ಮನವಿ

ಶ್ರೀಕೋದಂಡ ರಾಮ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳಿಗೆ ದಾನಿಗಳು ತಮ್ಮ ಧನ ಸಹಾಯವನ್ನು ಶ್ರೀಕೋದಂಡರಾಮ ದೇವಾಲಯ ಜೀರ್ಣೋದ್ಧಾರ ಸಮಿತಿ, ವಿಜಯ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ: 114701011004315 ಗೆ ಪಾವತಿಸಬಹುದು.

ಸುದ್ದಿಗೋಷ್ಠಿಯಲ್ಲಿ ದೇವಾಲಯ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಹೆಚ್. ಮಂಜುನಾಥ್, ಹೆಚ್.ಎನ್. ನಂಜುಂಡ, ಕಾರ್ಯದರ್ಶಿ ಗೋಪಿನಾಥ್ ಹೆಚ್.ಎಸ್. ಹಾಗೂ ರಾಮ ಸೇವಾ ಸಮಿತಿ ಅಧ್ಯಕ್ಷ ಹೆಚ್.ಎನ್. ತಿಮ್ಮಯ್ಯ ಉಪಸ್ಥಿತರಿದ್ದರು.