ಮಡಿಕೇರಿ, ಫೆ.2 : ದೇಶಕ್ಕೆ ಸವಾಲಾಗಿರುವ ಮತಾಂತರ, ಗೋಹತ್ಯೆ, ಲವ್ ಜಿಹಾದ್, ಬಾಂಗ್ಲಾ ನುಸುಳುಕೋರರ ವಿರುದ್ಧ ಹೋರಾಟ ನಡೆಸುತ್ತಿರುವ ಭಜರಂಗದಳಕ್ಕೆ ಸ್ವಯಂಸೇವಕರನ್ನು ಭರ್ತಿ ಮಾಡುವ ಅಭಿಯಾನ ತಾ.4ರಿಂದ 18ರವರೆಗೆ ಕೊಡಗು ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಡಿ.ನರಸಿಂಹ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್‍ನ ಯುವ ವಿಭಾಗವಾದ ಭಜರಂಗದಳವು ಸೇವಾ-ಸುರಕ್ಷಾ-ಸಂಸ್ಕಾರ ಎಂಬ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು 1984ರಲ್ಲಿ ಸ್ಥಾಪನೆಯಾಗಿದ್ದು, ಸುಮಾರು 75 ಲಕ್ಷಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರನ್ನು ಹೊಂದಿರುವ ದೇಶದ ಅತಿ ದೊಡ್ಡ ಹಿಂದೂ ಯುವ ಸಂಘಟನೆಯಾಗಿದೆ ಎಂದು ಹೇಳಿದರು.

ಭಜರಂಗದಳವು ದೇಶಾದ್ಯಂತ ಘಟಕಗಳನ್ನು ಪ್ರಾರಂಭಿಸಿ, ಲಕ್ಷಾಂತರ ಹಿಂದೂಗಳನ್ನು ಸಂಘಟಿಸಿ, ಸಂಸ್ಕಾರ ನೀಡಿ ದೇಶಭಕ್ತರನ್ನಾಗಿಸಿ, ಯುವಶಕ್ತಿ ಯನ್ನು ರಾಷ್ಟ್ರ ಶಕ್ತಿಯನ್ನಾಗಿ ಮಾಡುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿ ಕೊಂಡಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಕಾರ್ಯನಿರ್ವಹಿಸಲು ಕಟ್ಟಿಬದ್ಧರನ್ನಾಗಿಸುವ ಸಂಕಲ್ಪ ಮೂಡಿಸುತ್ತಿದೆ. ಆ ಮೂಲಕ ಹಿಂದೂ ಸಮಾಜಕ್ಕೆ ಎದುರಾಗಿರುವ ಸವಾಲುಗಳಾದ ಭಯೋತ್ಪಾದನೆ, ಮತಾಂತರ, ಗೋಹತ್ಯೆ, ಲವ್ ಜಿಹಾದ್, ಕಮ್ಯುನಿಸಂ, ಅಕ್ರಮ ಬಾಂಗ್ಲಾ ನುಸುಳುಕೋರರ ವಿರುದ್ಧ ಜಾಗೃತಿ ಮೂಡಿಸಿ ಹಿಂದೂ ಸಮಾಜದಲ್ಲಿ ಸಾಮರಸ್ಯ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ ಎಂದು ನರಸಿಂಹ ತಿಳಿಸಿದರು.

ಪ್ರಸಕ್ತ ಇರುವ ಸಕ್ರಿಯ ಕಾರ್ಯಕರ್ತರ ಸಂಖ್ಯೆಯನ್ನು ಎರಡು ಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಕಾರ್ಯಕರ್ತರ ಭರ್ತಿ ಕಾರ್ಯಕ್ರಮ ತಾ.4ರಿಂದ 18ರವರೆಗೆ ನಡೆಯಲಿದೆ ಎಂದು ಹೇಳಿದರು. ಭವ್ಯ ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಮತ್ತು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವದಕ್ಕಾಗಿ 18ರಿಂದ 35 ವರ್ಷದೊಳಗಿನ ಹಿಂದೂ ಯುವಕರ ಪಡೆಯ ಅಗತ್ಯವಿದ್ದು, ಇದಕ್ಕಾಗಿ ಭಜರಂಗದಳ ಭರ್ತಿ ಕಾರ್ಯಕ್ರಮ ಆಯೋಜಿಸಿದೆ. ಈ ಅಭಿಯಾನದಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರು, ಜಿಲ್ಲೆ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ 98450 44922ಕ್ಕೆ ಮೆಸೇಜ್ ಮಾಡಬೇಕು ಎಂದು ನರಸಿಂಹ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ವಿಶ್ವ ಹಿಂದೂ ಪರಿಷದ್ ಸಂಪರ್ಕ ಪ್ರಮುಖ್ ಎನ್.ಕೆ.ಅಜಿತ್‍ಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಮತ್ತೋರ್ವ ಹಿಂದೂ ಕಾರ್ಯಕರ್ತ ಸಂತೋಷ್‍ನ ಹತ್ಯೆಯಾಗಿದ್ದು, ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೇ ಕಾರಣವೆಂದು ಆರೋಪಿಸಿದರು.

‘ಅಮಾಯಕ ಅಲ್ಪಸಂಖ್ಯಾತರ’ ಹೆಸರಿನಲ್ಲಿ ಮತ್ತೊಮ್ಮೆ ಮುಸ್ಲಿಂ ಯುವಕರ ಮೇಲಿನ ಮೊಕದ್ದಮೆ ಗಳನ್ನು ಹಿಂಪಡೆಯಲು ಸರಕಾರ ಮುಂದಾಗಿದೆ. ಅಲ್ಪಸಂಖ್ಯಾತರೆಂದರೆ ರಾಜ್ಯದಲ್ಲಿ ಮುಸ್ಲಿಮರು ಮಾತ್ರವೇ? ಕ್ರೈಸ್ತರು, ಜೈನರು, ಸಿಖ್ಖರು, ಪಾರ್ಸಿ ಮುಂತಾದ ಜನಾಂಗಗಳು ಅಲ್ಪ ಸಂಖ್ಯಾತರಲ್ಲವೇ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಭಜರಂಗದಳದ ಜಿಲ್ಲಾ ಸಂಚಾಲಕ ಚೇತನ್, ಸಹ ಸಂಚಾಲಕ ಚಾಮೇರ ಪ್ರದೀಪ್, ಮಡಿಕೇರಿ ತಾಲೂಕು ಸಂಚಾಲಕ ಮನು ರೈ ಹಾಗೂ ಕುಶಾಲನಗರದ ರಾಜೀವ್ ಉಪಸ್ಥಿತರಿದ್ದರು.