ಮಡಿಕೇರಿ, ಫೆ. 2: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಸಂಚಲನ ಕಂಡುಬರುತ್ತಿದೆ. ಚಳಿ - ಬಿಸಿಲ ವಾತಾವರಣದ ನಡುವೆ ಚುನಾವಣಾ ಲೆಕ್ಕಾಚಾರದ ‘ಬಿಸಿ’ ಕಾಣಬರುತ್ತಿದೆ. ಜಾತ್ಯತೀತ ಜನತಾದಳದ ಚುನಾವಣಾ ಅಭ್ಯರ್ಥಿಗಳಾಗಿ, ಅಧಿಕೃತ ಘೋಷಣೆ ಯಾಗಿದ್ದರೂ, ಇಬ್ಬರು ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿದ್ದರೆ, ಇತ್ತ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ರಾಜ್ಯ ನಾಯಕರು ಮೌಖಿಕ ಘೋಷಿಸಿದ್ದು, ಇಲ್ಲಿಯೂ ‘ಬಿರುಸು’ ಕಂಡುಬರುತ್ತಿದೆ. ಮತ್ತೊಂದು ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‍ನಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿರುವದರಿಂದ ಯಾರಿಗೆ ಟಿಕೆಟ್ ನೀಡಬೇಕೆಂದು ಲೆಕ್ಕಾಚಾರ ಆರಂಭವಾಗಿದೆ. ಆಕಾಂಕ್ಷಿಗಳಿಂದ ಮತದಾರರಿಂದ ಅಭಿಪ್ರಾಯ, ಮಾಹಿತಿ ಸಂಗ್ರಹಿಸುವ ಕಾರ್ಯ ‘ಕೈ’ ಪಾಳಯದಲ್ಲಿ ನಡೆಯುತ್ತಿದೆ.
ಜಿಲ್ಲೆಯಲ್ಲಿ ಆಕಾಂಕ್ಷಿಗಳ ವೈಯಕ್ತಿಕ ನೆಲೆಯಲ್ಲಿ ಅಭಿಪ್ರಾಯ ಸಂಗ್ರಹಿಸುವ ಸಲುವಾಗಿ ಈಚೆಗೆ ಕೆ.ಪಿ.ಸಿ.ಸಿ. ವೀಕ್ಷಕರುಗಳಾಗಿ ವಿಧಾನಪರಿಷತ್ ಸದಸ್ಯ ಧರ್ಮಸೇನ ಹಾಗೂ ಮಾಜಿ ಶಾಸಕ ಬಾಲರಾಜ್ ಅವರುಗಳು ಆಗಮಿಸಿದ್ದರು.
ಈಗಾಗಲೇ ಜಿಲ್ಲಾ ಕಾಂಗ್ರೆಸ್‍ನಿಂದ ಕೆಲವು ಆಕಾಂಕ್ಷಿಗಳ ಪಟ್ಟಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ವೈಯಕ್ತಿಕ ಅಭಿಪ್ರಾಯ ಹಾಗೂ ಪಕ್ಷದವರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಇಲ್ಲಿನ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಆಕಾಂಕ್ಷಿಗಳನ್ನು ವೈಯಕ್ತಿಕವಾಗಿ ಆಹ್ವಾನಿಸಿ ಅಭಿಪ್ರಾಯ ಸಂಗ್ರಹಿಸ ಲಾಯಿತು. ಅಲ್ಲದೆ, ಇತರ ಆಕಾಂಕ್ಷಿಗಳಿದ್ದರೆ ಅವರುಗಳ ಮಾಹಿತಿ ನೀಡಲಾಯಿತು.
ಮಡಿಕೇರಿ ಕ್ಷೇತ್ರದಿಂದ ಟಿ.ಪಿ. ರಮೇಶ್, ಕೆ.ಪಿ. ಚಂದ್ರಕಲಾ, ಚಂದ್ರಮೌಳಿ, ಕೆ.ಎಂ. ಲೋಕೇಶ್, ನಾಪಂಡ ಮುತ್ತಪ್ಪ, ವಿರೂಪಾಕ್ಷಯ್ಯ ಅವರುಗಳು ಆಕಾಂಕ್ಷಿಗಳಾಗಿ ತಮ್ಮ ಕೋರಿಕೆ ಸಲ್ಲಿಸಿದ್ದಾರೆ.
ಹಾಗೆಯೇ ವೀರಾಜಪೇಟೆ ಕ್ಷೇತ್ರದಿಮದ ಅರುಣ್ ಮಾಚಯ್ಯ, ಪದ್ಮಿನಿ ಪೊನ್ನಪ್ಪ, ಹರೀಶ್ ಬೋಪಣ್ಣ, ಸರಿತಾ ಪೂಣಚ್ಚ, ತಾರಾ ಅಯ್ಯಮ್ಮ ಹಾಗೂ ಡಿಸಿಸಿ ಅಧ್ಯಕ್ಷ ಶಿವು ಮಾದಪ್ಪ ಇವರುಗಳು ಕೋರಿಕೆ ಸಲ್ಲಿಸಿದ್ದಾರೆ.
ಈ ಎಲ್ಲ ಆಕಾಂಕ್ಷಿಗಳ ಪಟ್ಟಿಯನ್ನು ವೀಕ್ಷಕರು ಕೆಪಿಸಿಸಿಗೆ ಸಲ್ಲಿಸಲಿದ್ದು, ಅಲ್ಲಿ ಪರಿಶೀಲನೆ ಬಳಿಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆ ಅಂತಿಮವಾಗಿ ಹೈಕಮಾಂಡ್ ನದ್ದಾಗಿರುತ್ತದೆ.
ಅಲ್ಲದೆ ಜಿಲ್ಲೆಗೆ ಆಗಮಿಸಿರುವ ವೀಕ್ಷಕರುಗಳು ಜಿಲ್ಲೆಯಲ್ಲಿ ಕೆಲ ದಿನಗಳ ಕಾಲ ಪ್ರವಾಸ ಮಾಡಲಿದ್ದು, ಕಾರ್ಯ ಕರ್ತರು ಹಾಗೂ ಮತದಾರರನ್ನು ಕೂಡ ಭೇಟಿ ಮಾಡಲಿದ್ದಾರೆ. ಅವರುಗಳಲ್ಲಿಯೂ ಕೂಡ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕೆಪಿಸಿಸಿಗೆ ಸಲ್ಲಿಸಲಿದ್ದಾರೆ. ಈ ಎಲ್ಲ ಮಾಹಿತಿ ವರದಿಯ ಆಧಾರದಲ್ಲಿ ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆ ಮಾಡಲಿರುವದಾಗಿ ತಿಳಿದು ಬಂದಿದೆ.
‘ಕೈ’ ಪಾಳಯದಲ್ಲಿ ಯಾವದೇ ಚುನಾವಣೆ ಸಂದರ್ಭದಲ್ಲಿ ಕೂಡ ಅಭ್ಯರ್ಥಿಗಳ ಆಯ್ಕೆ ಅಂತಿಮ ಕ್ಷಣದಲ್ಲಿ ಆಗುತ್ತಿದ್ದು, ಕಾರ್ಯಕರ್ತರು ನಾಯಕರಲ್ಲಿ ಗೊಂದಲ ವುಂಟಾಗುತಿತ್ತು. ಆದರೆ ಈ ಬಾರಿ ಈಗಾಗಲೇ ಚುನಾವಣಾ ‘ಬಿಸಿ’ ಏರಿರುವದಂತೂ ನಿಜ...!