ಮಡಿಕೇರಿ, ಫೆ. 2: ಜಿಲ್ಲೆಯ ಗಡಿ ಪ್ರದೇಶ ಸಂಪಾಜೆ ಸಮೀಪದ ಕೊಯನಾಡು ಗುಡ್ಡಗದ್ದೆ ಎಂಬಲ್ಲಿಗೆ ಮೂವರು ನಕ್ಸಲರು ಆಗಮಿಸಿ ಗ್ರಾಮಸ್ಥರಲ್ಲಿ ಭಯಭೀತಿಯನ್ನು ಮೂಡಿಸಿದ ಪ್ರಕರಣ ನಡೆದಿದೆ.ಇಂದು ಸಂಜೆಗತ್ತಲಲ್ಲಿ ಹಸಿರು ಬಣ್ಣದ ಮಿಲಿಟರಿ ಉಡುಪಿನಲ್ಲಿದ್ದ ಮೂವರು ನಕ್ಸಲರು ಇಲ್ಲಿಗೆ ಆಗಮಿಸಿ ಗುಡ್ಡಗದ್ದೆಯ ನಿವಾಸಿಗಳಾದ ಕುಡಿಯರ ಶಂಕಪ್ಪ, ಕಿಟ್ಟ, ನಾಗವೇಣಿ, ನಳಿನಾಕ್ಷಿ ಎಂಬವರ ಮನೆಯಿಂದ ಅಕ್ಕಿ ಮತ್ತಿತರ ಸಾಮಗ್ರಿಗಳನ್ನು ಪಡೆದುಕೊಂಡು ಮತ್ತಷ್ಟು ಅಕ್ಕಿ ಸಾಮಗ್ರಿಗಳು ಬೇಕೆಂದು ಒತ್ತಾಯಿಸಿದ್ದಾರೆನ್ನಲಾಗಿದೆ. ಆದರೆ ಇಲ್ಲಿನ ನಿವಾಸಿಗಳ ಬಳಿ ಅಕ್ಕಿ ಸಾಮಗ್ರಿಗಳು ಇಲ್ಲದಿದ್ದಾಗ ಶಂಕಪ್ಪ ಎಂಬವರನ್ನು ಸಮೀಪದ ಅಂಗಡಿಗೆ ನಕ್ಸಲರೇ ಹಣ ಕೊಟ್ಟು ಕಳುಹಿಸಿ ದಿನಸಿ ಸಾಮಗ್ರಿಗಳನ್ನು ತರಿಸಿಕೊಂಡಿದ್ದಾರೆ. ಮತ್ತೆ ನಕ್ಸಲರು ಗುಡ್ಡ ಹತ್ತಿ ಸುಬ್ರಹ್ಮಣ್ಯ ಕಡೆಗೆ ತೆರಳಿದ್ದಾರೆನ್ನಲಾಗಿದೆ. ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಸುಂದರ್‍ರಾಜ್, ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಹಾಗೂ ಸಿಬ್ಬಂದಿಗಳು ತೆರಳಿ ತಡರಾತ್ರಿವರೆಗೂ ನಕ್ಸಲರ ಹುಡುಕಾಟದಲ್ಲಿ ತೊಡಗಿದ್ದರು.