ಮಡಿಕೇರಿ, ಫೆ. 2 : ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.
ಪೆರಾಜೆ ಗ್ರಾಮದ ಕೊಳಂಗಾಯ ಹರೀಶ್ ಎಂಬವರ ರಬ್ಬರ್ ತೋಟದಲ್ಲಿ ಮಡಿಕೇರಿ ಚಾಮುಂಡೇಶ್ವರಿ ವಿದ್ಯುತ್ ನಿಗಮವು ಈ ಹಿಂದೆ ಕೆ. ಪೆರಾಜೆ ಪಿ. ಪೆರಾಜೆ ಗ್ರಾಮದ ಅನುಕೂಲಕ್ಕಾಗಿ ವಿದ್ಯುತ್ ಪರಿವರ್ತಕವೊಂದನ್ನು ಅಳವಡಿಸಿತ್ತು. ತಾ. 23.3.2015ರಂದು ಮಧ್ಯಾಹ್ನ ಪರಿವರ್ತಕದಿಂದ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಹರೀಶ್ ಸಮೃದ್ಧವಾಗಿ ಬೆಳೆಸಿದ 400ರಷ್ಟು ರಬ್ಬರ್ ಮರಗಳು ಬೆಂಕಿಯ ಕಿಡಿಗೆ ಆಹುತಿಯಾಗಿ ಸಂಪೂರ್ಣ ನಾಶಗೊಂಡಿದ್ದವು. ಬ್ಯಾಂಕ್ ಹಾಗೂ ಕೈ ಸಾಲ ಮಾಡಿ ಕೃಷಿ ಮಾಡಿ ಇವರು ಬೇಸತ್ತು. ತನಗಾದ ನಷ್ಟವನ್ನು ತುಂಬಿಕೊಡುವಂತೆ ಕೊಡಗು ಮೈಸೂರು ಸೆಸ್ಕಾಂ ಇಲಾಖೆಗೆ ಅಲ್ಲದೆ ಕೊಡಗು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ, ಯಾವದೇ ಪ್ರಯೋಜನವಾಗದೇ ತಿರಸ್ಕರಿಸಲ್ಪಟ್ಟಿತ್ತು. ಇದರಿಂದ ನಿರಾಶರಾದ ಹರೀಶ್ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಅರ್ಜಿ ಸಲ್ಲಿಸಿದ್ದರು. ಪುರಸ್ಕರಿಸಿದ ಅರ್ಜಿಯ ವ್ಯಾಜ್ಯದ ವಿಚಾರಣೆಯ ಎರಡು ವರ್ಷಗಳ ಕಾಲ ನಡೆದು ಕಳೆದ ಜ. 27ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಶ್ರೀಕಂಠ, ಸದಸ್ಯರಾದ ಕೆ.ಡಿ. ಪಾರ್ವತಿ ಮತ್ತು ಲತಾ ಇವರನ್ನೊಳಗೊಂಡ ಸಮಿತಿಯು ಅಂತಿಮ ತೀರ್ಪು ನೀಡಿದೆ. ದೂರುದಾರ ಕೃಷಿಕ ಹರೀಶ್ ಅವರಿಗೆ ರೂ. 6 ಲಕ್ಷದ 7 ಸಾವಿರ ನಷ್ಟ ಪರಿಹಾರವನ್ನು ಮಡಿಕೇರಿ ಚಾಮುಂಡೇಶ್ವರಿ ವಿದ್ಯುತ್ ನಿಗಮವು ನೀಡುವಂತೆ ಆದೇಶ ನೀಡಿದೆ.
ಈ ಆದೇಶದ ಪ್ರಕಾರ ರೂ. 6 ಲಕ್ಷ ಕಷ್ಟಪಟ್ಟು ಸಮೃದ್ಧವಾಗಿ ಬೆಳೆಸಿದ 400 ರಬ್ಬರ್ ಗಿಡದ ಕೃಷಿ ಕಾರ್ಯಕ್ಕೆ ತೊಡಗಿಸಿ ವ್ಯಯಿಸಿದ ಖರ್ಚು ವೆಚ್ಚ ಹಾಗೂ ರೂ. 5 ಸಾವಿರ ಬೆಳೆಯನ್ನು ಕಳಕೊಂಡು ಮಾನಸಿಕವಾಗಿ ಕೊರಗಿದ ರೈತನ ನೋವಿನ ಅಂಗವಾಗಿ, ಅಲ್ಲದೇ 2 ಸಾವಿರ ರೂ.ಗಳನ್ನು ವ್ಯಾಜ್ಯಕ್ಕೆ ಗ್ರಾಹಕರ ಪರಿಹಾರ ವೇದಿಕೆಗೆ ಸಲ್ಲಿಸಿದ ಖರ್ಚಿನ ಬಾಬ್ತು ಎಂದು ಆದೇಶಿಸಿದೆ. 2 ತಿಂಗಳ ಅವಧಿಯೊಳಗೆ ದೂರುದಾರರಿಗೆ ಪೂರ್ಣ ಮೊತ್ತವನ್ನು ಸೆಸ್ಕಾಂ ಇಲಾಖೆ ನೀಡಬೇಕು. ನಿಗದಿತ ಸಮಯದೊಳಗೆ ಹಣ ಸಂದಾಯ ಮಾಡದಿದ್ದ ಪಕ್ಷದಲ್ಲಿ ಶೇಕಡ 9ರಷ್ಟು ಬಡ್ಡಿಯನ್ನು ಸೇರಿಸಿ ನೀಡುವ ಮುಖಾಂತರ ನಷ್ಟ ಪರಿಹಾರದ ಹಣ ನೀಡುವಂತೆ ಆದೇಶಿಸಿದೆ. ದೂರುದಾರರ ಪರವಾಗಿ ವಕೀಲ ಎಂ.ಎ. ನಿರಂಜನ್ ವಾದ ಮಂಡಿಸಿದರು.