ವೀರಾಜಪೇಟೆ, ಫೆ. 2: ಭಾರತೀಯ ಜನತಾ ಪಕ್ಷ ಹೊಸ ಸಣ್ಣ ತಾಲೂಕುಗಳ ರಚನೆಗೆ ಸದಾ ಬೆಂಬಲ ನೀಡುತ್ತಿದೆ. ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕು ರಚನೆಗೆ ಬಿಜೆಪಿ ಬೆಂಬಲ ಇದೆ ಎಂದು ತಾಲೂಕು ಬಿಜೆಪಿ ವಕ್ತಾರ ಟಿ.ಪಿ ಕೃಷ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಹೊಸದಾಗಿ 43 ತಾಲೂಕುಗಳನ್ನು ರಚನೆ ಮಾಡಿದ್ದಾರೆ. ಆಗಲೂ ಕೊಡಗಿನ ಕುಶಾಲನಗರ ಹಾಗೂ ಪೊನ್ನಂಪೇಟೆಯನ್ನು ತಾಲೂಕು ಕೇಂದ್ರಗಳಾಗಿ ಮಾರ್ಪಡಿಸಲು ಒಲವು ತೋರಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರು ವಿಧಾನ ಮಂಡಲದ ಅಧಿವೇಶನದಲ್ಲಿ ಕೊಡಗು ಜಿಲ್ಲೆಗೆ ಇನ್ನೂ ಎರಡು ತಾಲೂಕುಗಳು ಆಗಬೇಕು ಎಂದು ಆಗ್ರಹಿಸಿದರೂ ಸರ್ಕಾರ ಅವರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಅವರು, ಜಿಲ್ಲೆಯ ಜನಪ್ರತಿನಿಧಿಯೊಬ್ಬರು ತಾಲೂಕು ರಚನೆಗೆ ವಿರುದ್ದವಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೂಡಲೇ ದಾಖಲೆ ಬಿಡುಗಡೆಗೊಳಿಸಲಾಗುವದು ಎಂದು ಸಭೆಯಲ್ಲಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಆ ಜನಪ್ರತಿನಿಧಿ ಯಾರೆಂಬುದನ್ನು ದಾಖಲೆ ಸಮೇತ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.