ಸುಂಟಿಕೊಪ್ಪ, ಫೆ. 2: ಪ್ರಾದೇಶಿಕ ಪಕ್ಷದಿಂದ ಮಾತ್ರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಕೊಡವ ಸಮಾಜದಲ್ಲಿ ಜಾತ್ಯತೀತ ಜನತಾದಳ ಅಲ್ಪಸಂಖ್ಯಾತ ಘಟಕದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿ ಎಲ್ಲಾ ವರ್ಗದವರು ನೆಮ್ಮದಿಯ ಜೀವನ ಸಾಧಿಸಲು ಹೆಚ್.ಡಿ. ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಬೇಕು ಕೊಡಗಿನಲ್ಲಿ ಜೆಡಿಎಸ್ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿ ಗೆಲುವಿಗೆ ಸಹಕರಿಸಬೇಕೆಂದು ಹೇಳಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ ಪೂವಯ್ಯ ಮಾತನಾಡಿ, ರಾಷ್ಟ್ರೀಯ ಪಕ್ಷಗಳು ಅಲ್ಪಸಂಖ್ಯಾತರನ್ನು ಬಳಸಿಕೊಂಡು ಮತ ಪಡೆಯುತ್ತಾರೆಯೇ ಹೊರತು ಅವರ ಅಭಿವೃದ್ಧಿಗೆ ಯಾವ ರೀತಿಯ ಯೋಜನೆಗಳನ್ನು ರೂಪಿಸಿಕೊಂಡಿಲ್ಲ. ಮತ ಬ್ಯಾಂಕ್‍ಗೆ ಒಳಪಡಿಸುವ ಬಗ್ಗೆ ಅಲ್ಪಸಂಖ್ಯಾತರು ಎಚ್ಚರದಿಂದರಬೇಕು ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯದ ಜನಹಿತ ಕಾಪಾಡಲು ಸಾಧ್ಯ ಅಲ್ಪಸಂಖ್ಯಾತರ ಮತ ವಿಭಜನೆಯಾದರೆ ಕೋಮುವಾದಿ ಪಕ್ಷ ಗೆಲುವು ಸಾಧಿಸಲು ಅವಕಾಶವಿದೆ. ಈ ಚುನಾವಣೆ ಮಹಾಸಮರವಾಗಿದ್ದು, ರಾಜ್ಯದ ದಿಕ್ಸೂಚಿ ಬದಲಿಸಲಿದೆ ಎಂದು ಹೇಳಿದರು.
ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಇಸಾಕ್‍ಖಾನ್ ಮಾತನಾಡಿ, 65 ವರ್ಷಗಳಿಂದ ಅಲ್ಪಸಂಖ್ಯಾತರು ಕಾಂಗ್ರೆಸ್‍ಗೆ ಮತ ನೀಡುತ್ತಾ ಬಂದರೂ ಅವರ ಅಭಿವೃದ್ಧಿಗೆ ಸರಕಾರ ಮೀಸಲಿಟ್ಟ ಹಣ ಅತ್ಯಲ್ಪವಾಗಿದೆ, ಅಲ್ಲದೆ ಶೈಕ್ಷಣಿಕವಾಗಿ ಅಲ್ಪಸಂಖ್ಯಾತರು ಮುಂದೆ ಬರಲು ಕಾಂಗ್ರೆಸ್ ಸರಕಾರ ಸಹಕಾರ ನೀಡದೆ ಅಲ್ಪಸಂಖ್ಯಾತರನ್ನು ಕತ್ತಲೆಯಲ್ಲಿ ಇಡಲಾಗಿದೆ. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್‍ಗೆ ಮತ ನೀಡಿ ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡುವದನ್ನು ಆರಿತು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದರು.
ಅಧ್ಯಕ್ಷತೆಯನ್ನು ಗ್ರಾ.ಪಂ. ಮಾಜಿ ಅಧ್ಯಕ್ಷರೂ ಹಾಲಿ ಸದಸ್ಯ ಕೆ.ಇ. ಕರೀಂ ವಹಿಸಿ ಮಾತನಾಡಿದರು. ಜಿಲ್ಲಾ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ ಕೊಡಗಿನಲ್ಲಿ 24,000 ಸಾವಿರ ಮಂದಿ ಮುಸ್ಲಿಮರು 9 ಸಾವಿರ ಮಂದಿ ಕ್ರೈಸ್ತರ ಮತವೇ ಅಭ್ಯರ್ಥಿ ಗೆಲುವಿಗೆ ನಿರ್ಣಾಯವಾಗಿದೆ. ಈ ನಿಟ್ಟಿನಲ್ಲಿ ಮತ ವಿಭಜನೆಯಾಗದಂತೆ ಅಲ್ಪಸಂಖ್ಯಾತರು ಒಗ್ಗಟಿನಿಂದ ಜೆಡಿಎಸ್‍ಗೆ ಮತ ಚಲಾಯಿಸಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಮಡಿಕೇರಿ ನಗರ ಜೆಡಿಎಸ್ ಅಧ್ಯಕ್ಷ ರಾಜೇಶ್ ಎಲ್ಲಪ್ಪ, ನಗರಸಭಾ ಸದಸ್ಯ ಅಶ್ರಫ್, ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೋರ್ಚಾ ಉಪಾಧ್ಯಕ್ಷ ಎಸ್.ಎನ್. ರಾಜಾರಾವ್, ಜಿ.ಪಂ. ಮಾಜಿ ಸದಸ್ಯೆ ಭಾನುಮತಿ, ಮಹಿಳಾ ಘಟಕದ ಅಧ್ಯಕ್ಷೆ ಗ್ರೇಸಿ ಮಡಿಕೇರಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮಹಮ್ಮದ್ ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದಿಂದ ಹಲವು ಕಾರ್ಯಕರ್ತರು ಜೆಡಿಎಸ್‍ಗೆ ಸೇರ್ಪಡೆಗೊಂಡರು.