ವೀರಾಜಪೇಟೆ, ಫೆ. 2: ಗ್ರಾಮೀಣ ಪ್ರದೇಶದ ರಸ್ತೆಗಳೆಲ್ಲವೂ ಮಳೆಯಿಂದಾಗಿ ದುಸ್ಥಿತಿಯಲ್ಲಿದ್ದು, ಅನುದಾನದ ಕೊರತೆಯಿಂದ ಕಾಮಗಾರಿ ತಡವಾಗಿದೆ. ಮುಂದಿನ ದಿನದಲ್ಲಿ ಉಳಿದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಸಮೀಪದ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕೇರಿ ಗ್ರಾಮದ ತೋರೆರ ಕುಟುಂಬಸ್ಥರ ಮನೆಗೆ ತೆರಳುವ ರಸ್ತೆಗೆ ರೂ. 5 ಲಕ್ಷ ಶಾಸಕರ ವಿಶೇಷ ಅನುದಾನದಿಂದ ಡಾಂಬರಿಕರಣ, ಬೊಳ್ಳುಮಾಡು ಸೊಸೈಟಿಯಿಂದ ಪಟ್ಟಂಡ, ಪಂದ್ಯಂಡ, ಕುಯ್ಯಿಮಂಡ ಕುಟುಂಬಸ್ಥರ ಮನೆ ಸಾರ್ವಜನಿಕ ರಸ್ತೆ ಡಾಂಬರಿಕರಣ ಕಾಮಗಾರಿಗೆ ರೂ. 5 ಲಕ್ಷ ಹಾಗೂ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಟ್ಟೆಡೆ ಮಸೀದಿ ಮುಂಬಾಗದ ರಸ್ತೆ ಅಭಿವೃದ್ಧಿಗೆ ಶಾಸಕರ ವಿಶೇಷ ಅನುದಾನ ರೂ. 5 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಹಿಂದೆ ಬಿ.ಜೆ.ಪಿ. ಸರಕಾರದ ಅವಧಿಯಲ್ಲಿ ಕೊಡಗಿನ ರಸ್ತೆ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಂದಿತ್ತು ಈಗ ಅನುದಾನದ ಕೊರತೆಯಿಂದ ಇನ್ನೂ ರಸ್ತೆಗಳ ದುರಸ್ತಿ ಕಾಮಗಾರಿ ಬಾಕಿ ಉಳಿದಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ರಾಜ್ಯದಲ್ಲಿ ಹಿಂದಿನ ಬಿ.ಜೆ.ಪಿ. ಸರಕಾರದ ಅವಧಿಯಲ್ಲಿ ಕೊಡಗಿನ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಅನುದಾನದ ಕೊರತೆ ಇರಲಿಲ್ಲ. ಗಡಿ ಪ್ರದೇಶವಾದ ವೀರಾಜಪೇಟೆಯ ಕೆದಮುಳ್ಳೂರು, ತೋರ, ಹೆಗ್ಗಳ ಇತರ ಗ್ರಾಮಗಳಿಗೆ ಹೆಚ್ಚು ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ಅನೇಕ ರಸ್ತೆಗಳು ಹೊಂಡ-ಗುಂಡಿಗಳಾಗಿವೆ. ವಾಹನಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ಶಾಸಕರ ಅನುದಾನ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಿಂದ ಆದಷ್ಟು ರಸ್ತೆಗಳ ಅಭಿವೃದ್ಧಿ ಕಾಮಗಾರಿ ಮಾಡಲಾಗಿದ್ದು ಮುಂದಿನ ಅನುದಾನದಲ್ಲಿ ಗ್ರಾಮಸ್ಥರ ಸಹಕಾರದಿಂದ ಇನ್ನೂ ಹೆಚ್ಚು ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗುವದು ಎಂದರು.
ಭೂಮಿಪೂಜೆ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಆಲತಂಡ ಸೀತಮ್ಮ, ಬಿ.ಜೆ.ಪಿ. ಜಿಲ್ಲಾ ಸಮಿತಿಯ ಪಟ್ರಪಂಡ ರಘು ನಾಣಯ್ಯ, ಮಲ್ಲಂಡ ಮಧು ದೇವಯ್ಯ, ಕುಂಬೆಯಂಡ ಗಣೇಶ್, ಗ್ರಾಮಸ್ಥರಾದ ಎಂ. ನಟೇಶ್ ಕಾಳಪ್ಪ, ಪಿ.ಅರುಣ್, ಎಂ. ಪ್ರತಾಪ್, ವಸ್ಮಾ, ಪಿ.ಎಂ. ಅಶೋಕ್, ಎಂ.ಪಿ. ಮಧು, ಪಿ.ಇ. ವಾಸು, ಟಿ.ಪಿ. ಪೆಮ್ಮಯ್ಯ, ಕಾರ್ಯಪ್ಪ, ಬೋಪಣ್ಣ, ಅಪ್ಪಚ್ಚು ಮುಂತಾದವರು ಉಪಸ್ಥಿತರಿದ್ದರು.