ಮಡಿಕೇರಿ, ಫೆ. 2: ಭಾರತಕ್ಕೆ ಶ್ರೀಲಂಕಾದಿಂದ ರಫ್ತ್ತಾಗುತ್ತಿರುವ ಕಾಳುಮೆಣಸು ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರಕ್ಕೆ ಪತ್ರ ಬರೆದಿದ್ದು, ಶ್ರೀಲಂಕಾ ಸಕಾರಾತ್ಮಕವಾಗಿ ಸ್ಪಂದಿಸಿವೆ.

ಕಾಳುಮೆಣಸು ಬೆಳೆಗಾರರ ಸಂಘಟನೆ 2 ಬಾರಿ ಕೇಂದ್ರದ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಆಮದಿನಿಂದ ಆಗುತ್ತಿರುವ ಅನಾನುಕೂಲ ಹಾಗೂ ಕಾನೂನು ದುರ್ಬಳಕೆ ಮೂಲಕ ಆಮದುದಾರರು ವಿಯೆಟ್ನಾಂ ಕಾಳುಮೆಣಸನ್ನು ಶ್ರೀಲಂಕಾ ಮೂಲಕ ಭಾರತಕ್ಕೆ ತರುತ್ತಿರುವ ಕುರಿತು ವಿವರಿಸಿತು. ಅಲ್ಲದೆ ಈ ಬಗ್ಗೆ ಜ. 21ರಂದು ಸಂಘಟನೆ ಸಂಚಾಲಕ ಕೊಂಕೋಡಿ ಪದ್ಮನಾಭ ಅವರು ವಾಣಿಜ್ಯ ಸಚಿವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿದ್ದರು. ಇದಕ್ಕೆ ಜ. 31ರಂದು ವಾಣಿಜ್ಯ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಎಸ್. ಬ್ಯಾನರ್ಜಿ ಉತ್ತರಿಸಿದ್ದಾರೆ.

ಅವರು ಬರೆದ ಪತ್ರದಲ್ಲಿ ಭಾರತ ಸರ್ಕಾರ ಕಾಳುಮೆಣಸು ಸೇರಿದಂತೆ ಸಂಬಾರ ಪದಾರ್ಥಗಳ ಸ್ಥಿರತೆ ಮತ್ತು ಅಭಿವೃದ್ಧಿಗೆ ಕಾಳಜಿ ಹೊಂದಿದ್ದು, ಈ ನಿಟ್ಟಿನಲ್ಲಿ ನೀತಿ ಇಲ್ಲದೆ ಕಾಳುಮೆಣಸು ಆಮದು ಮಾಡುತ್ತಿರುವ ಬಗ್ಗೆ ಸಂಬಂಧಿತರ ಗಮನ ಸೆಳೆದಿರುವದನ್ನು ಉಲ್ಲೇಖಿಸಿದ್ದಾರೆ.

ಶ್ರೀಲಂಕಾ ಸರ್ಕಾರಕ್ಕ್ಕೆ ಈ ಬಗ್ಗೆ ಪತ್ರ ಹಾಕಿದ್ದು, ರಫ್ತು ಸಂಬಂಧಿ ನೀಡುವ ಸರ್ಟಿಪಿಕೇಟ್ ಬಗ್ಗೆ ಅಲ್ಲಿನ ಅಬಕಾರಿ ಸುಂಕ ಇಲಾಖೆ ಹೊಸ ನೀತಿ ಜಾರಿ ಮಾಡಿರುವ ಬಗ್ಗೆ ಮಾಹಿತಿ ನೀಡಿದೆ ಎಂದು ಪ್ರಸ್ತಾಪಿಸಿದ್ದಾರೆ. ಆಮದಾಗುವ ಕಾಳುಮೆಣಸಿನ ಸಂಬಂಧಿಸಿದ ದಾಖಲಾತಿಗಳನ್ನು ಕೇಂದ್ರ ಅಬಕಾರಿ ಮತ್ತು ಸುಂಕ ನಿರ್ದೇಶನಾಲಯ ಕಟ್ಟುನಿಟ್ಟಾಗಿ ಪರಿಶೀಲಿಸಿ ಅನಧಿಕೃತವಾಗಿ ವಿಯೆಟ್ನಾಂನ ಕಾಳುಮೆಣಸು ಶ್ರೀಲಂಕಾ ಮೂಲಕ ಭಾರತ ಪ್ರವೇಶಿಸದಂತೆ ತಡೆಯಲು ವಾಣಿಜ್ಯ ಸಚಿವಾಲಯ ಸೂಚಿಸಿದೆ ಎಂದು ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

ಆಮದಾದ ವಿಯೆಟ್ನಾಂ ಕಾಳುಮೆಣಸಿನಲ್ಲಿ ಕ್ರಿಮಿನಾಶಕ ಅಂಶವಿದೆಯೇ ಎಂಬದನ್ನು ಪರಿಶೀಲಿಸಲು ಆಹಾರ ಸುರಕ್ಷ ಮತ್ತು ಗುಣಮಟ್ಟ ಇಲಾಖೆಗೆ ಸೂಚಿಸಲಾಗಿದೆ ಎಂದೂ ಸರ್ಕಾರದ ಕ್ರಮಗಳ ಬಗ್ಗೆ ಕಾಳುಮೆಣಸು ಬೆಳೆಗಾರರ ಸಂಘಟಕರಿಗೆ ಸರ್ಕಾರದ ಪತ್ರದಲ್ಲಿ ವಿವರಿಸಲಾಗಿದೆ.

ಸರ್ಕಾರದ ಸ್ಪಂದನ ವನ್ನು ಸಂಘಟನೆಯ ಸಂಚಾಲಕ ಕೊಂಕೋಡಿ ಪದ್ಮನಾಭ ಹಾಗೂ ಸಂಯೋಜಕ ಕೆ.ಕೆ. ವಿಶ್ವನಾಥ್ ಸ್ವಾಗತಿಸಿದ್ದಾರೆ.