ಮೂರ್ನಾಡು, ಫೆ. 3: ಆಸ್ತಿ ವೈಷಮ್ಯದ ಕಲಹ ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಇರುತ್ತದೆ. ಆದರೆ.., ಪ್ರಜ್ಞಾವಂತರೆನಿಸಿಕೊಂಡಿರುವ, ಶಿಸ್ತು-ಸಂಯಮದ ನಾಡಾಗಿರುವ ಕೊಡಗು ಜಿಲ್ಲೆಯಲ್ಲಿ ಇದು ಅತಿಯಾಗುತ್ತಿರುವದು ವಿಪರ್ಯಾಸವೇ ಸರಿ. ತುಂಡು ಭೂಮಿಯ ಆಸೆಗಾಗಿ ಇಂದು ಮೂರು ಜೀವಗಳು ಬಲಿಯಾಗಿವೆ. ಜವ್ವನ ಕಳೆದು ಸಂಧ್ಯಾಕಾಲದಲ್ಲಿ ನೆಮ್ಮದಿಯಾಗಿರಬೇಕಿದ್ದ ಜೀವಗಳು ಗುಂಡೇಟಿಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಇಂದು ಮುಂಜಾನೆ ಘಟಿಸಿ ಹೋಗಿದೆ. ಮಣ್ಣಿಗಾಗಿ ಕಾದಾಡಿ ಕೊನೆಗೆ ಮಣ್ಣಿನಲ್ಲಿ ಮಣ್ಣಾಗಿ ಹೋದ ದುರ್ಘಟನೆ ಸಂಭವಿಸಿದೆ.
ಆಸ್ತಿಯಲ್ಲಿ ಪಾಲು ಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರಿಬ್ಬರ ನಡುವಿನ ವೈಮನಸ್ಸು ಭುಗಿಲೆದ್ದು, ಇಂದು ಕೊಲೆ ಹಾಗೂ ಆತ್ಮಹತ್ಯೆಯಲ್ಲಿ ಪರ್ಯವಸಾನಗೊಂಡಿದೆ. ಅಣ್ಣ ಹಾಗೂ ಅತ್ತಿಗೆಗೆ ಗುಂಡು ಹೊಡೆದು ಸಾಯಿಸಿ, ತಮ್ಮನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರ್ನಾಡು ಸನಿಹದ ಎಂ. ಬಾಡಗ ಗ್ರಾಮ ನಿವಾಸಿ, ಪಳಂಗಿಯಂಡ ದೇವಯ್ಯ (69) ಹಾಗೂ ಪತ್ನಿ ದೇಚಮ್ಮ (ಪ್ರೇಮ-53) ಎಂಬವರುಗಳು ಹತ್ಯೆಗೀಡಾಗಿದ್ದು, ಹತ್ಯೆಗೈದ ದೇವಯ್ಯ ಅವರ ಸಹೋದರ ಉತ್ತಪ್ಪ (ತಮ್ಮುಣಿ-66) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಬೆಳಿಗ್ಗೆ ಮೊಳಗಿದ ಗುಂಡು
ಪಳಂಗಿಯಂಡ ದೇವಯ್ಯ, ಉತ್ತಪ್ಪ ಹಾಗೂ ಅಯ್ಯಣ್ಣ ಮೂವರು ಸಹೋದರರಾಗಿದ್ದಾರೆ. ದೇವಯ್ಯ ಹಾಗೂ ಅಯ್ಯಣ್ಣ ಬಾಡಗ ಗ್ರಾಮದಲ್ಲೇ ನೆಲೆಸಿದ್ದರೆ, ಮಾಜಿ ಯೋಧರಾಗಿದ್ದ ಉತ್ತಪ್ಪ ಸಂಸಾರ ಸಮೇತ ಮೈಸೂರಿನಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದಾರೆ. ಬಿಡುವಿನಲ್ಲಿ ತೋಟದ ಕೆಲಸ ಕಾರ್ಯಗಳಿರುವ ಸಂದರ್ಭ ತೋಟಕ್ಕೆ ಬಂದು ತೋಟದ ಮನೆಯಲ್ಲಿ ನೆಲೆಸುತ್ತಾರೆ. ಈಗ್ಗೆ 15 ದಿನಗಳ ಹಿಂದೆ ಬಂದು ಕಾಫಿ ಕುಯ್ಲು ಹಾಗೂ ಕರಿಮೆಣಸು ಕುಯ್ಲು ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.
ಇಂದು ಬೆಳಿಗ್ಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಉತ್ತಪ್ಪ ಮನೆಗೆ ಬಂದಿದ್ದಾರೆ. ಈ ಸಂದರ್ಭ ಉತ್ತಪ್ಪ ಅವರ ಮನೆಯ ಬಳಿಯಿರುವ ತೋಟದಲ್ಲಿ ದೇವಯ್ಯ ಹಾಗೂ ಪತ್ನಿ ದೇಚಮ್ಮ ಕೆಲಸ ಮಾಡುತ್ತಿದ್ದ ಸಂದರ್ಭ ಸಹೋದ ರರಿಬ್ಬರ ನಡುವೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಕೆರಳಿದ ಉತ್ತಪ್ಪ ಮನೆಯಲ್ಲಿದ್ದ ಜೋಡಿ ನಳಿಕೆ ಕೋವಿ ತಂದು ದೇಚಮ್ಮ ಅವರಿಗೆ ಹಿಂಬದಿಯಿಂದ ಎಡಭಾಗ ಬೆನ್ನಿಗೆ ಗುಂಡು ಹಾರಿಸಿ ದ್ದಾರೆ. ಮತ್ತೊಂದು ಗುಂಡನ್ನು ದೇವಯ್ಯ ಅವರ
(ಮೊದಲ ಪುಟದಿಂದ) ಹೊಟ್ಟೆಗೆ ಹಾರಿಸಿದ್ದಾರೆ. ನಂತರ ತಾವೂ ಕೂಡ ತಮ್ಮ ಮನೆಯ ಎದುರಿನ ತೋಟದೊಳಗೆ ಹೋಗಿ ಅಲ್ಲಿ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ದೇವಯ್ಯ ಹಾಗೂ ದೇಚಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇತ್ತ ನರಳಾಡುತ್ತಿದ್ದ ಉತ್ತಪ್ಪರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಸಂದರ್ಭ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ವಿವಾದಿತ ಜಾಗದಲ್ಲಿ ಮರಣ
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜಗಳದಲ್ಲಿ ರಸ್ತೆಯಲ್ಲೋ, ಮನೆಯಲ್ಲೋ ಕಲಹವಾಗಿ ಹತ್ಯೆಗಳಾಗುತ್ತಿರುತ್ತವೆ. ಆದರೆ ಇಲ್ಲಿ ಯಾವ ಜಾಗದ ಬಗ್ಗೆ ವಿವಾದವಿತ್ತೋ ಅದೇ ನೆಲದಲ್ಲಿ ದೇವಯ್ಯ ಹಾಗೂ ದೇಚಮ್ಮ ದಂಪತಿಯರ ಜೀವ ಬಲಿಯಾಗಿದೆ. ತಾವು ಕಷ್ಟಪಟ್ಟು, ಬೆವರು ಸುರಿಸಿ ಬೆಳೆಸಿದ ತೋಟದಲ್ಲಿಯೇ ಜೀವ ಕಳೆದುಕೊಂಡಿರುವದು ವಿಪರ್ಯಾಸವೇ ಸರಿ...
ಪಿತ್ರಾರ್ಜಿತ ಆಸ್ತಿ ಮೂವರು ಸಹೋದರರಿಗೂ ಪಾಲಾಗಿದೆ. ದೇವಯ್ಯ ಹಾಗೂ ಉತ್ತಪ್ಪ ಅವರುಗಳ ಆಸ್ತಿ ಒತ್ತೊಟ್ಟಿಗೆ ಇದ್ದು, ದೇವಯ್ಯ ಅವರ ತೋಟಕ್ಕೆ ಹೊಂದಿಕೊಂಡಂತೆ ಇದ್ದ 4 ಎಕರೆ ಮೈದಾನದಂತಿದ್ದ ಖಾಲಿ ಜಾಗವನ್ನು ದೇವಯ್ಯ ಅವರು ಕುಟುಂಬಸ್ಥರಿಂದ 1990ರಲ್ಲಿ ಖರೀದಿಸಿದ್ದರು. ಆದರೆ ಈ ಜಾಗ ಕುಟುಂಬಸ್ಥರಾಗಿದ್ದರಿಂದ ಈ ಜಾಗದಲ್ಲೂ ಮೂವರಿಗೂ ಸಮಪಾಲು ಬೇಕು, ಅಲ್ಲದೆ ತನ್ನ ಜಾಗಕ್ಕೆ ತೆರಳಲು ರಸ್ತೆ ಬಿಟ್ಟುಕೊಡಬೇಕು ಎಂದು ಉತ್ತಪ್ಪ ತಕರಾರು ತೆಗೆದಿದ್ದರೆನ್ನಲಾಗಿದೆ.
ಈ ಸಂಬಂಧ ಕೆಲವು ವರ್ಷಗಳ ಹಿಂದೆ ಉತ್ತಪ್ಪ ರಸ್ತೆಗೆಂದು ಕಾಫಿ ಗಿಡಗಳನ್ನು ಕಡಿದ ಸಂದರ್ಭ ಪ್ರಕರಣ ಪೊಲೀಸ್ ಮೆಟ್ಟಿಲೇರಿ ಸಂಧಾನದೊಂದಿಗೆ ಮುಕ್ತಾಯ ಕಂಡಿತ್ತು. ಇದೀಗ ಮತ್ತೆ ಇತ್ತೀಚೆಗೆ ಉತ್ತಪ್ಪ ಜನರನ್ನು ಕರೆದುಕೊಂಡು ಬಂದು ಈ ಜಾಗದಲ್ಲಿದ್ದ ಕಫಿ ಕುಯ್ಯುತ್ತಿದ್ದ ಸಂದರ್ಭ ಮತ್ತೆ ಜಗಳವಾಗಿದೆ. ಮತ್ತೆ ಪೊಲೀಸ್ ಮೆಟ್ಟಿಲೇರಿದಾಗ ಪೊಲೀಸರು ತೀರ್ಮಾನ ಆಗುವವರೆಗೆ ಯಾರೂ ಕೂಡ ತೋಟ ಪ್ರವೇಶಿಸದಂತೆ, ಕಾಫಿ ಕುಯ್ಯುದಂತೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಉತ್ತಪ್ಪ ನ್ಯಾಯಾಲಯದಲ್ಲಿ ಜಾಗದಲ್ಲಿ ಪಾಲು ಬೇಕೆಂದು ದಾವೆ ಹೂಡಿದ್ದರು. ಪ್ರತಿಯಾಗಿ ದೇವಯ್ಯ ಕೂಡ ದಾವೆ ಹೂಡಿದ್ದರು. ಈ ಸಂಬಂಧ ಕಳೆದ ಜ. 27 ರಂದು ಉತ್ತಪ್ಪ ಅವರ ದಾವೆಗೆ ತಡೆಯಾಜ್ಞೆ ಸಿಕ್ಕಿದ್ದು, ನಿನ್ನೆದಿನ ಅದರ ಪ್ರತಿ ದೇವಯ್ಯ ಅವರ ಕೈ ಸೇರಿತ್ತು. ಅದರ ಆಧಾರಲ್ಲಿ ದೇವಯ್ಯ ಅವರು ಪೊಲೀಸರಿಗೆ ಪ್ರತಿಯನ್ನು ನಿನ್ನೆ ನೀಡಿ, ಇಂದು ಬೆಳಿಗ್ಗೆ ಪತ್ನಿ ಸಹಿತ ಕೆಲಸದವರೊಂದಿಗೆ ಕಾಫಿ ಕುಯ್ಯಲೆಂದು ತೆರಳಿದ್ದ ಸಂದರ್ಭ ವಿಷಯ ತಿಳಿದ ಉತ್ತಪ್ಪ ಆಗಮಿಸಿದಾಗ ಮತ್ತೆ ಜಗಳ ಸಂಭವಿಸಿ ಮೂರು ಜೀವಗಳು ಬಲಿಯಾಗುವದರೊಂದಿಗೆ ಪ್ರಕರಣ ಅಂತ್ಯಕಂಡಿದೆ. ದೇವಯ್ಯ ಅವರ ಅಳಿಯ ಕಂಬೀರಂಡ ಯೋಗೀಶ್ ಅಪ್ಪಯ್ಯ ಹಾಗೂ ಸಂಬಂಧಿಕರು ಹೇಳುವಂತೆ ದೇವಯ್ಯ ಅವರು ಖರೀದಿಸಿದ ಜಾಗ ಇದಾಗಿದ್ದು, ಅವರೇ ಸ್ವಂತ ತೋಟ ಮಾಡಿಸಿದ್ದಾರೆ. ಉತ್ತಪ್ಪ ಅವರು ತಕರಾರು ತೆಗೆದಿದ್ದರು. ಅದರಲ್ಲಿ ಅರ್ಧ ಎಕರೆ ಉತ್ತಪ್ಪ ಅವರಿಗೆ ನೀಡಿದ್ದಾರೆ. ಅಲ್ಲದೆ ಉತ್ತಪ್ಪ ಅವರ ತೋಟಕ್ಕೆ ತೆರಳಲು ನೇರವಾದ ಮತ್ತೊಂದು ರಸ್ತೆಯಿದ್ದರೂ, ಈ ತೋಟದ ನಡುವೆ ರಸ್ತೆ ಬೇಕೆಂದು ದಾವೆ ಹೂಡಿದ್ದಾರೆಂದು ಹೇಳುತ್ತಾರೆ.
ಸದ್ದು ಕೇಳಿ ಹುಡುಕಾಟ
ಬೆಳಿಗ್ಗೆ ಅಂದಾಜು 9.15ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ದೇವಯ್ಯ ಅವರ ತೋಟದಲ್ಲಿ ಕಾಫಿ ಕುಯ್ಲು ಕೆಲಸ ಆಗುತ್ತಿದ್ದರೆ, ಇತ್ತ ಉತ್ತಪ್ಪ ಅವರ ತೋಟದಲ್ಲಿ ಮೆಣಸು ಕುಯ್ಯಲಾಗುತ್ತಿತ್ತು. ಇದ್ದಕ್ಕಿದ್ದ ಹಾಗೆ ಮೂರು ಸುತ್ತು ಗುಂಡಿನ ಸದ್ದು ಕೇಳಿದಾಗ ಉತ್ತಪ್ಪ ಅವರ ಪತ್ನಿ ಗ್ರೇಸಿ ಹಾಗೂ ಕೆಲಸಗಾರರು ಬೆಚ್ಚಿ ಬಿದ್ದಿದ್ದಾರೆ. ವಿವಾದದ ಬಗ್ಗೆ ಮೊದಲೇ ಅರಿವಿದ್ದ ಅವರುಗಳು ಕೆಲಸಬಿಟ್ಟು, ಮೆಣಸು ಕುಯ್ಯುತ್ತಿದ್ದವರು ಏಣಿಯಿಂದ ಜಿಗಿದು ಓಡಿ ಬಂದಿದ್ದಾರೆ. ಆದರೆ ಸದ್ದು ಎತ್ತಲಿಂದ ಬಂದಿತೆಂದು ತಿಳಿಯದೆ ತೋಟವೆಲ್ಲ ಹುಡುಕಾಡಿದಾಗ ಉತ್ತಪ್ಪ ಅವರ ಮನೆಯ ಬಳಿಯ ಬೇಲಿಯಂಚಿನಲ್ಲಿ ಎರಡು ದೇಹಗಳು ಬಿದ್ದಿರುವದು ಗೋಚರಿಸಿದೆ. ದೇವಯ್ಯ ಅವರ ಕೆಲಸಗಾರರು ಅಳಿಯ ಯೋಗೀಶ್ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಇತ್ತ ಉತ್ತಪ್ಪ ಅವರನ್ನೂ ಕಾಣದಿದ್ದಾಗ ಮತ್ತೆ ಎರಡೂ ತೋಟಗಳಲ್ಲಿ, ಮನೆಯೆಲ್ಲ ಹುಡುಕಾಡಿದ್ದಾರೆ. ಎಲ್ಲೂ ಕಾಣದಿದ್ದಾಗ ಮನೆಯೆದುರಿನ ಬಾಳೆಗಿಡಗಳ ಬಳಿ ನರಳುವ ಸದ್ದು ಕೇಳಿಸಿದೆ. ಅಲ್ಲಿ ನೋಡಿದಾಗ ಉತ್ತಪ್ಪ ಗುಂಡು ಹಾರಿಸಿಕೊಂಡು ಜೀವನ್ಮರಣ ಸ್ಥಿತಿಯಲ್ಲಿ ನರಳುತ್ತಿದ್ದುದು ಗೋಚರಿಸಿದೆ. ಅಷ್ಟರಲ್ಲಿ ಮೂರ್ನಾಡು ಉಪಠಾಣೆ ಪೊಲೀಸರೂ ಬಂದಾಗಿತ್ತು. ನಂತರ ಅವರನ್ನು ವಾಹನದಲ್ಲಿ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ಬಂಧುಗಳ ರೋದÀನ
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕುಟುಂಬಸ್ಥರ, ಬಂಧುಗಳ ರೋದÀನ ತೋಟದ ಗಿಡಮರಗಳ ಮಧ್ಯೆ ಮಾದರ್Àನಿಸುತ್ತಿತ್ತು. ದೇವಯ್ಯ ಅವರ ಪುತ್ರಿ ಮೌನ ಮೃತದೇಹದ ಮೇಲೆ ಬಿದ್ದು ರೋದಿಸುತ್ತಿದ್ದ ದೃಶ್ಯವಂತೂ ಮನಕಲಕುವಂತಿತ್ತು. ಎಲ್ಲ ಸೇರಿ ಕುಳಿತು ಮಾತುಕತೆ ಮಾಡಿ ಎಲ್ಲವನ್ನು ಸರಿಪಡಿಸಬಹುದಿತ್ತು. ಯಾರದೋ ಮಾತು ಕೇಳಿಕೊಂಡು ವೈಷಮ್ಯ ಸಾಧಿಸಿ ಈ ರೀತಿಯಾಯಿತಲ್ಲ, ಈ ವಯಸ್ಸು ಕಾಲದಲ್ಲಿ ಇದೆಲ್ಲ ಬೇಕಿತ್ತಾ.., ಈಗ ಯಾರಿಗೇನು ಲಾಭವಾಯಿತು..’ ಎಂದು ಬಂಧುಗಳು ಅವಲತ್ತುಕೊಳ್ಳುತ್ತಿದ್ದರು.
ಇತ್ತ ಮಡಿಕೇರಿ ಆಸ್ಪತ್ರೆಯಲ್ಲಿ ಉತ್ತಪ್ಪ ಅವರ ಪತ್ನಿ ಗ್ರೇಸಿ ಗೋಳಾಡುತ್ತಿದ್ದರು. ‘ಏನೂ ಮಾಡಬೇಡಿ, ಸುಮ್ಮನಿರಿ ಅಂತ ಹೇಳಿದ್ರೂ ಕೇಳದೆ ಹೀಗೆ ಮಾಡಿಬಿಟ್ರು’ ಎಂದು ಬಂಧುಗಳೊಡನೆ ಅಳುತ್ತಿದ್ದರು. ದೇವಯ್ಯ ಅವರ ಪುತ್ರ ಮಧು ಮಸ್ಕತ್ನಲ್ಲಿದ್ದು, ಆತ ಬಂದ ಬಳಿಕ ಅಂತ್ಯಕ್ರಿಯೆ ನೆರವೇರಲಿದೆ.
ಉತ್ತಪ್ಪ ಅವರ ಮೃತದೇಹವನ್ನು ಮೈಸೂರಿಗೆ ಕೊಂಡೊಯ್ಯುವದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರದೀಪ್, ಮೂರ್ನಾಡು ಉಪಠಾಣಾಧಿಕಾರಿ ಭೋಜಪ್ಪ, ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸಿ ಪುತ್ರಿ ಮೌನ ನೀಡಿದ ಹೇಳಿಕೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಜೋಡಿನಳಿಕೆ ಬಂದೂಕು, ಸ್ಥಳದಲ್ಲಿ ಉಪಯೋಗಿಸಿದ ಮೂರು ತೋಟ ಹಾಗೂ ಉಪಯೋಗಿಸದ 2 ತೋಟಗಳನ್ನು ವಶಕ್ಕೆ ಪಡೆದಿದ್ದಾರೆ.
ವರದಿ: ಕುಡೆಕಲ್ ಸಂತೋಷ್