ಸೋಮವಾರಪೇಟೆ, ಫೆ.3: 11ನೇ ಶತಮಾನದ 1058ರಲ್ಲಿ ಕೊಂಗಾಳ್ವರಸನಿಂದ ನಿರ್ಮಿಸಲ್ಪಟ್ಟಿತು ಎನ್ನಲಾದ ಕೊಡಗಿನ ಅತೀ ದೊಡ್ಡ ಜೈನ ಬಸದಿಗಳನ್ನು ಹೊಂದಿರುವ ಮುಳ್ಳೂರು ಗ್ರಾಮದಲ್ಲಿ ಶನಿವಾರಸಂತೆ ಹೋಬಳಿ ಜಾನಪದ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿದ್ದ ಜಾನಪದ ಜಾತ್ರೆ ಅದ್ದೂರಿಯೊಂದಿಗೆ ಅರ್ಥಗರ್ಭಿತವಾಗಿ ಜರುಗಿತು.ಜಾನಪದ ಕಲೆ, ಸಂಸ್ಕøತಿ, ಆಚಾರ-ವಿಚಾರ, ಸಾಹಿತ್ಯ, ಸಂಬಂಧಗಳ ಗಟ್ಟಿ ಬೇರಿನಂತಿರುವ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಜಾನಪದ ಜಾತ್ರೆ, ಗ್ರಾಮಸ್ಥರ ಪಾಲ್ಗೊಳ್ಳುವಿಕೆಯೊಂದಿಗೆ ಊರಿನ ಹಬ್ಬದಂತೆಯೇ ನಡೆಯಿತು.

ಬೆಳಿಗ್ಗೆ ಮುಳ್ಳೂರು ಗ್ರಾಮದ ಜಂಕ್ಷನ್‍ನಲ್ಲಿರುವ ಅರಳೀಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಜಾನಪದ ಪರಿಕರಗಳೊಂದಿಗೆ ಮಹಿಳೆಯರು ಶಾಲಾ ಆವರಣದವರೆಗೆ ಕಲಶÀ ಮೆರವಣಿಗೆ ನಡೆಸಿದರು.

ಸರ್ಕಾರಿ ಶಾಲೆಯ ಶಿಕ್ಷಕ ಸತೀಶ್ ಅವರ ಕಲ್ಪನೆಯೊಂದಿಗೆ ಶಾಲೆಯ ಆವರಣದಲ್ಲಿ ಮೂಡಿಬಂದಿದ್ದ ವಿವಿಧ ಕಲಾಕುಸುರಿಗಳು,

(ಮೊದಲ ಪುಟದಿಂದ) ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಬಿಂಬಿಸುವ ವಸ್ತು ಪ್ರಾಕಾರಗಳು ಗ್ರಾಮದಲ್ಲಿ ಜಾನಪದ ಲೋಕವನ್ನೇ ಸೃಷ್ಟಿಸಿದಂತೆ ಕಂಡುಬಂತು.

ಜಾನಪದ ಬದುಕು, ಶ್ರೀಮಂತಿಕೆಗೆ ಪೂರಕವೆಂಬಂತೆ ಇಡೀ ವೇದಿಕೆಯನ್ನು ವಿಶೇಷವಾಗಿ ಸಿದ್ಧಗೊಳಿಸಲಾಗಿತ್ತು. ಇದರೊಂದಿಗೆ ಜಾನಪದ ಚಿತ್ರಕಲೆಗಳ ಪ್ರದರ್ಶನ, ವೇಷಭೂಷಣ, ತಿಂಡಿ ತಿನಿಸು, ಪ್ರಾಚೀನ ಪರಿಕರ, ವಸ್ತುಗಳು, ಸಾಹಿತ್ಯ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಕಾರ್ಯಕ್ರಮದಲ್ಲಿ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಮೂಡಿಬಂದ ಜಾನಪದ ನಾಟಕ, ನೃತ್ಯರೂಪಕಗಳು ಜನಮನವನ್ನು ರಂಜಿಸಿತು.

ಮುಳ್ಳೂರು ಶಾಲೆಯ ಸುಷ್ಮಿತ ತಂಡದಿಂದ ಮೂಡಿಬಂದ ಕಂಸಾಳೆ ನೃತ್ಯ, ಇದೇ ಶಾಲೆಯ ಮಕ್ಕಳಿಂದ ಮೂಡಿಬಂದ ‘ನ್ಯಾಯ ತೀರ್ಮಾನ’ ಎಂಬ ಕಿರುನಾಟಕ, ನಿಡ್ತ ಶಾಲಾ ಮಕ್ಕಳ ಕಂಸಾಳೆ, ಗೋಪಾಲಪುರ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮ ಸೇರಿದಂತೆ, ಮಾಲಂಬಿ ಆಶ್ರಮ ಶಾಲೆಯ ಜೇನುಕುರುಬರ ಮಕ್ಕಳಿಂದ ಮೂಡಿಬಂದ ‘ಜೇನುಕುರುಬರ ಮಕ್ಕ ನಂಗ ನಾವು ಇಲ್ಲೇ ಕಾಡೂಲೇ ಹುಟ್ಟಿದಾದು..,ಕಾಡೂಲೆ ಬಾಳುದಾದು’ ಎಂಬ ವಿಶೇಷ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೊಡಗು ಜಿಲ್ಲಾ ಜಾನಪದ ಪರಿಷತ್‍ನ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಜಾನಪದ ಸಂಸ್ಕøತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಪರಿಷತ್‍ನಿಂದ ಮಾಡಲಾಗುತ್ತಿದೆ. ಜಾನಪದ ಉಳಿಕೆ ಕೇವಲ ಪರಿಷತ್‍ನ ಕಾರ್ಯ ಮಾತ್ರವಲ್ಲ; ಸಮಾಜದ ಸಾಮೂಹಿಕ ಜವಾಬ್ದಾರಿಯೂ ಇದೆ ಎಂದರು.

ಯಾಂತ್ರೀಕೃತ ಬದುಕಿನಲ್ಲಿ ಜೀವನದ ಸತ್ವಗಳು ಕಳೆದುಹೋಗುತ್ತಿದೆ. ಜಾನಪದ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನದ ಅಗತ್ಯವಿದೆ. ಜಾತಿ ಮತ ಪಂಥಗಳನ್ನು ಮೀರಿ ಸಮಾಜದ ಸಂಸ್ಕøತಿ, ಕಲೆ, ಸಾಹಿತ್ಯದ ಉಳಿವು ಜಾನಪದ ಪರಿಷತ್‍ನ ಕಾರ್ಯಸೂಚಿಯಾಗಿದೆ ಎಂದರು.

ಪರಿಷತ್‍ನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮಾತನಾಡಿ, ಜಾನಪದ ಎಂಬದು ಸುಂದರ ಬದುಕಿನ ಚಿತ್ರಣ. ಹುಟ್ಟು-ಬದುಕು-ಸಾವು ಇವುಗಳ ನಡುವಿನ ಮಾನವೀಯ ಮೌಲ್ಯಗಳ ತಿರುಳು ಜಾನಪದ. ಜಾನಪದದ ಪ್ರತಿಯೊಂದು ಪ್ರಾಕಾರವೂ ಮಾದರಿಯಾಗಿದ್ದು, ಸ್ನೇಹಾಚಾರ ದೂರಾಗುತ್ತಿರುವ ಇಂದಿನ ದಿನಮಾನಸದಲ್ಲಿ ಜಾನಪದವೇ ಸಂಬಂಧಗಳ ಬೆಸುಗೆಗೆ ನಾಂದಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶನಿವಾರಸಂತೆ ಹೋಬಳಿ ಜಾನಪದ ಪರಿಷತ್‍ನ ಅಧ್ಯಕ್ಷೆ ಸುಜಲಾದೇವಿ ಮಾತನಾಡಿ, ನಾಗಾಲೋಟದ ಜೀವನದಲ್ಲಿ ಪ್ರಾಚೀನತೆ ಮಾಯವಾಗಿದ್ದು, ಜೀವನದ ಸಾರ ಮರೆಯಾಗುತ್ತಿದೆ. ಶ್ರೀಮಂತ ಸಂಸ್ಕøತಿಯ ಜಾನಪದ ವೈಭವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾನಪದ ಜಾತ್ರೆ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪರಿಷತ್‍ನ ಜಿಲ್ಲಾ ಉಪಾಧ್ಯಕ್ಷರಾದ ಕುಶಾಲಪ್ಪ, ರಾಣಿ ಮಾಚಯ್ಯ, ಪದಾಧಿಕಾರಿ ಜಯಶ್ರೀ ಅನಂತಶಯನ, ಶಿಕ್ಷಣ ತಜ್ಞ ಚಂದ್ರಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಣಿ, ಪರಿಷತ್‍ನ ತಾಲೂಕು ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಗ್ರಾ.ಪಂ. ಸದಸ್ಯ ವಿಜಯಕುಮಾರ್, ಮುಖ್ಯೋಪಾಧ್ಯಾಯ ಮಂಜುನಾಥ್, ಸಿಆರ್‍ಪಿ ಮಧುಕುಮಾರ್, ವೇದಕುಮಾರ್, ವಸಂತ್‍ಕುಮಾರ್, ಶಿಕ್ಷಕ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶನಿವಾರಸಂತೆ ಹೋಬಳಿ ಜಾನಪದ ಪರಿಷತ್‍ನ ಅಧ್ಯಕ್ಷೆ ಸುಜಲಾದೇವಿ, ಪದಾಧಿಕಾರಿಗಳಾದ ಸುರೇಶ್ ಚೆರಿಯಮನೆ, ಒಡೆಯನಪುರ ಸುರೇಶ್, ದಿನೇಶ್ ಮಾಲಂಬಿ, ಗುರುಪ್ರಸಾದ್, ದಿವಾಕರ್, ಕುಮಾರ್, ಲತಾ ದೇವರಾಜ್, ಮೀನಾಕ್ಷಿ ಸೇರಿದಂತೆ ಗ್ರಾಮಸ್ಥರು, ಶಾಲಾಡಳಿತ ಮಂಡಳಿಯವರು, ಶಿಕ್ಷಕರುಗಳು ಜಾನಪದ ಜಾತ್ರೆಯ ಯಶಸ್ಸಿಗೆ ಶ್ರಮಿಸಿದರು.