ನಾಪೆÇೀಕ್ಲು, ಫೆ. 1: ಸ್ಥಳೀಯ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದು ಅದೃಷ್ಟವಶಾತ್ ಯಾವದೇ ಅಪಾಯ ಸಂಭವಿಸದಿದ್ದರೂ ಅಪಾರ ನಷ್ಟ ಸಂಭವಿಸಿದೆ.
ಇಂದು ಬೆಳಿಗ್ಗೆ 7 ಗಂಟೆಗೆ ಈ ಅನಾಹುತ ಸಂಭವಿಸಿದೆ. ಕಟ್ಟಡವು ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಈ ಕಟ್ಟಡದ ಗೋಡೆಗೆ ಒತ್ತಾಗಿ ಕಳೆದ 6 ವರ್ಷಗಳ ಹಿಂದೆ ಅಕ್ಷರ ದಾಸೋಹ ಅಡುಗೆ ಕೋಣೆಯನ್ನು ಸೇರಿಸಿ ಕಟ್ಟಿರುವದರಿಂದ ಈ ಅವಘಡ ಸಂಭವಿಸಿದೆ ಎಂದು ಆರೋಪ ಕೇಳಿ ಬರುತ್ತಿದೆ. ಈ ಶಾಲೆಯಲ್ಲಿ ಅಂದಿನ ಕಾಲದಲ್ಲಿ 700 ಕ್ಕೂ ಅಧಿಕ ಮಕ್ಕಳು ಇದ್ದುದರಿಂದ ಈ ಕಟ್ಟಡಲ್ಲಿ 1ನೇ ಮತ್ತು 2ನೇ ತರಗತಿಯನ್ನು ನಡೆಸಲಾಗುತ್ತಿತ್ತು. ಇದೀಗ ಕಳೆದ 15 ವರ್ಷಗಳಿಂದ ಮಕ್ಕಳ ಕೊರತೆ ಇದ್ದು ಈ ಕಟ್ಟಡ ಖಾಲಿಯಾಗಿ ಉಳಿದಿತ್ತು.
ಮೇಲ್ಛಾವಣಿ ಕುಸಿತದ ವಿಷಯವರಿತ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮನ ಮುರಳಿ ಕರುಂಬಮ್ಮಯ್ಯ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ನಂತರ ಮಾತನಾಡಿ, ತಾಲೂಕಿನ ಹಲವೆಡೆ ಶತಮಾನದ ಹಳೆಯ ಶಾಲಾ ಕಟ್ಟಡಗಳಿದ್ದು ಇಂತಹ ಪ್ರಯೋಜನಕ್ಕೆ ಬಾರದ ಕಟ್ಟಡಗಳನ್ನು ಪರಿಶೀಲಿಸಿ ಕೂಡಲೇ ಕೆಡವಲು ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಈ ಕಟ್ಟಡದ ಪಕ್ಕದಲ್ಲಿರುವ ಅಕ್ಷರ ದಾಸೋಹ ಕಟ್ಟಡವನ್ನು ಈ ಕಟ್ಟಡದ ಗೋಡೆಗೆ ಸೇರಿಸಿ ಕಟ್ಟಿದ್ದು ಇದು ಕಳಪೆ ಕಾಮಗಾರಿಯಾಗಿರುವದರಿಂದ ಇಂದು ಶಾಲಾ ಕಟ್ಟಡ ಬೀಳಲು ಕಾರಣವಾಗಿದ್ದು ಅಕ್ಷರ ದಾಸೋಹ ಕಟ್ಟಡದ ಕಾಮಗಾರಿಯನ್ನು ಮಾಡಿದ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಅವರು ಸಂಬಂಧಿಸಿದ ಇಲಾಖೆಯನ್ನು ಒತ್ತಾಯಿಸಿದರು.
ಈ ಸಂದರ್ಭ ಬಿ.ಜೆ.ಪಿ. ವಲಯ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ನಾಟೋಳಂಡ ಸಚಿನ್, ಮುಖ್ಯ ಶಿಕ್ಷಕ ಸುಬ್ರಮಣಿ ಇದ್ದರು.
- ದುಗ್ಗಳ