ಮೂರ್ನಾಡು: ನವಚೇತನ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಮಹಾಸಭೆ ಪ್ರಯುಕ್ತ ಸದಸ್ಯರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಯಿತು. ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಲಾದ ಕ್ರೀಡಾಕೂಟವನ್ನು ಪೊಲೀಸ್ ಉಪಠಾಣಾಧಿಕಾರಿ ರುದ್ರೇಶ್ ಬ್ಯಾಟಿಂಗ್ ಮಾಡಿ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಪಳಂಗಂಡ ಕೆ. ಅಪ್ಪಣ್ಣ ಬಾಲ್ ಎಸೆಯುದರ ಮೂಲಕ ಉದ್ಘಾಟಿಸಿದರು.
ಸಂಘದ ಸದಸ್ಯರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ, ಹಗ್ಗ-ಜಗ್ಗಾಟ, ಬಾರದ ಕಲ್ಲು ಎಸೆತ ಹಾಗೂ ಕಣ್ಣು ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆಗಳು ನಡೆಯಿತು. ಕ್ರಿಕೆಟ್ ಪಂದ್ಯದಲ್ಲಿ ಅಧ್ಯಕ್ಷ ಇಲೆವೆನ್ ತಂಡ ಪ್ರಥಮ, ಖಜಾಂಚಿ ಇಲೆವೆನ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡರು. ಹಗ್ಗ-ಜಗ್ಗಾಟದಲ್ಲಿ ಉಪಾಧ್ಯಕ್ಷ ಇಲೆವೆನ್ ತಂಡ ಪ್ರಥಮ, ಕಾರ್ಯದರ್ಶಿ ಇಲೆವೆನ್ ತಂಡ ದ್ವಿತೀಯ ಬಹುಮಾನಗಳಿಸಿಕೊಂಡರು. ಬಾರದ ಕಲ್ಲು ಎಸೆತದಲ್ಲಿ ಮಿಥುನ್ (ಪ್ರ), ಸಿ.ಎಸ್. ಸಂತೋಷ್ (ದ್ವಿ), ಎ.ಎನ್. ಪ್ರಶಾಂತ್ (ತೃ), ಕಣ್ಣು ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ವಿನಯ್ ಕುಮಾರ್ (ಪ್ರ), ಟಿ.ಕೆ. ಚಂದ್ರ (ದ್ವಿ), ಹೆಚ್.ಎ. ಸತೀಶ್ (ತೃ) ಬಹುಮಾನ ಪಡೆದುಕೊಂಡರು.
ನವಚೇತನ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಉಮೇಶ್ ಬಂಗೇರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಸಂಘದ ಕಾರ್ಯದರ್ಶಿ ಎ.ಎನ್. ಪ್ರಶಾಂತ್ ವಾರ್ಷಿಕ ವರದಿ, ಖರ್ಚು ವೆಚ್ಚವನ್ನು ಸಭೆಗೆ ಮಂಡಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಆರ್. ನವೀನ್, ಖಜಾಂಚಿ ಎ.ವಿ. ತಿಮ್ಮಪ್ಪ ಹಾಗೂ ಸದಸ್ಯರು ಹಾಜರಿದ್ದರು.