ಸಿದ್ದಾಪುರ, ಫೆ. 1 : ದುಬಾರೆ ಆನೆ ಶಿಬಿರದಲ್ಲಿ ಸಾಕಾನೆ ಧಾಳಿ ಮಾಡಿದ ಹಿನ್ನೆಲೆ ಕಾವಾಡಿ ಯೋರ್ವ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸಾಕಾನೆ ಶಿಬಿರದಲ್ಲಿ ಕಾವಾಡಿ ಕೆಲಸ ಮಾಡುತಿದ್ದ ಅಪ್ಪಯ್ಯ ಎಂಬವರೇ ಆನೆ ಧಾಳಿಗೆ ಒಳಗಾದ ವ್ಯಕ್ತಿ. ಇಂದು ಬೆಳಿಗ್ಗೆ ಕಾಡಿಗಟ್ಟಲು ಸಾಕಾನೆ ಗೋಪಿಯನ್ನು ಸರಪಳಿ ಯಿಂದ ಬಿಚ್ಚುತ್ತಿದ್ದ ಸಂದರ್ಭ ಏಕಾಏಕಿ ಸಾಕಾನೆ ಗೋಪಿ ದಂತದಿಂದ ತಿವಿದು ಗಾಯಗೊಳಿಸಿದೆ. ಪರಿಣಾಮ ಗಂಭೀರಗಾಯಗೊಂಡ ಅವರಿಗೆ ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಗೆ ರವಾನೆ ಮಾಡಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಗೋಪಿಯನ್ನು ನೋಡಿಕೊಳ್ಳುತ್ತಿದ್ದು, ಮೈಸೂರು ದಸರಾಕ್ಕೆ ಕರೆದೊಯ್ಯುತ್ತಿರುವದಾಗಿ ಅಪ್ಪಯ್ಯ ತಿಳಿಸಿದ್ದಾರೆ. ಇದುವರೆಗೆ ಯಾವತ್ತು ಹೀಗೆ ಆನೆ ಗೋಪಿ ನಡೆದುಕೊಂಡಿಲ್ಲವೆಂದ ಅವರು, ಇಂದು ಮಾತ್ರ ಸರಪಳಿಯಿಂದ ಬಿಚ್ಚಲು ಕೂಡ ಬಿಟ್ಟಿಲ್ಲವೆಂದು ವಿವರಿಸಿದ್ದಾರೆ.

ಆನೆ ಗೋಪಿಯ ಧಾಳಿಯಿಂದ ಹೊಟ್ಟೆಯ ಎಡಭಾಗದ ಪಕ್ಕೆಗಳಿಗೆ ಘಾಸಿಯಾಗಿದ್ದು, ಕಾವಾಡಿ ಅಪ್ಪಯ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.ಈ ಘಟನೆಯ ಕುರಿತು ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.